ಮನೆ ಸುದ್ದಿ ಜಾಲ ಜು.23 ರಂದು ಚಾಮುಂಡೇಶ್ವರಿ ಕ್ಷೇತ್ರದ ಆಶ್ರಯ ಮನೆಗಳ ಯೋಜನೆಗೆ ಶಂಕುಸ್ಥಾಪನೆ

ಜು.23 ರಂದು ಚಾಮುಂಡೇಶ್ವರಿ ಕ್ಷೇತ್ರದ ಆಶ್ರಯ ಮನೆಗಳ ಯೋಜನೆಗೆ ಶಂಕುಸ್ಥಾಪನೆ

0

ಮೈಸೂರು (Mysuru): ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಿದ್ದರಾಮಯ್ಯ ಶಾಸಕರಾಗಿದ್ದಾಗ 2005ರಲ್ಲಿ ರೂಪಿಸಿದ್ದ ‘ಆಶ್ರಯ ಮನೆ’ಗಳ ಯೋಜನೆಯು 17 ವರ್ಷಗಳ ನಂತರ ಶಂಕುಸ್ಥಾಪನೆ ಹಂತಕ್ಕೆ ಬಂದಿದೆ.
ಮಂಡಕಳ್ಳಿ ಗ್ರಾಮದಲ್ಲಿ ವಿಮಾನ ನಿಲ್ದಾಣದ ಹಿಂಭಾಗದ ದಡದಹಳ್ಳಿ ರಸ್ತೆಯಲ್ಲಿ ಗುರುತಿಸಲಾಗಿರುವ ಜಾಗದಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ.
‘ಕ್ಷೇತ್ರ ವ್ಯಾಪ್ತಿಯ ವಸತಿ ರಹಿತರನ್ನು ಗುರುತಿಸಿ ಅವರಿಗೆ ಸೂರು ಕಲ್ಪಿಸಲಾಗುತ್ತಿದೆ. ‘ಪ್ರಧಾನಮಂತ್ರಿ ಅವಾಸ್ ಯೋಜನೆ-ಸರ್ವರಿಗೂ ಸೂರು’ ಯೋಜನೆಯಡಿ 2,446 ಮನೆಗಳ ನಿರ್ಮಾಣಕ್ಕೆ ಜುಲೈ 23ರಂದು ಸಂಜೆ 4ಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು ಶಾಸಕ ಜಿ.ಟಿ. ದೇವೇಗೌಡ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.
ರೂ 158 ಕೋಟಿ ಅಂದಾಜು ವೆಚ್ಚದಲ್ಲಿ 33 ಎಕರೆ ಜಾಗದಲ್ಲಿ ಜಿ+1 ಹಾಗೂ ಜಿ+2 ಮನೆಗಳನ್ನು ನಿರ್ಮಿಸಲಾಗುತ್ತಿದೆ. ವಸತಿ ಸಚಿವ ವಿ.ಸೋಮಣ್ಣ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಸಂಸದ ಪ್ರತಾಪ ಸಿಂಹ ಪಾಲ್ಗೊಳ್ಳಲಿದ್ದಾರೆ. ಮೇಯರ್‌ ಸುನಂದಾ ಫಾಲನೇತ್ರ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದರು.
‘ಅನುಷ್ಠಾನದ ಹಂತಕ್ಕೆ ಬಂದಿರುವ ಈ ಸಂದರ್ಭದಲ್ಲಿ, ಆಗ ಯೋಜನೆ ರೂಪಿಸಿದ್ದ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಒಂದೂವರೆ ವರ್ಷದಲ್ಲಿ ನಿರ್ಮಾಣ ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು.
2005ರಲ್ಲಿ ಖರೀದಿ:
‘2005ರಲ್ಲಿ ಕ್ಷೇತ್ರದ ಆಶ್ರಯ ಯೋಜನೆಯಡಿ 1,410 ನಿವೇಶನಗಳ ರಚನೆಗಾಗಿ ಮಂಡಕಳ್ಳಿ ಗ್ರಾಮದಲ್ಲಿ 40 ಎಕರೆ ಜಮೀನು ಖರೀದಿಸಲಾಗಿತ್ತು. 2007ರಲ್ಲಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ನಿವೇಶನ ರಚಿಸಿ, ಫಲಾನುಭವಿಗಳಿಗೆ ಹಂಚಿಕೆ ಮಾಡಲು ನಿರ್ಣಯಿಸಲಾಗಿತ್ತು. 2012ರಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದವರು ಜಿ+1 ಮತ್ತು ಜಿ+2 ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಬಳಿಕ ಅನುಷ್ಠಾನಗೊಂಡಿರಲಿಲ್ಲ’ ಎಂದು ತಿಳಿಸಿದರು.
‘2016ರಲ್ಲಿ ನಾನು ಸಭೆ ನಡೆಸಿ ಪರಿಶೀಲಿಸಿದಾಗ, 2,446 ಮನೆಗಳಿಗೆ 1,500 ಮಂದಿ ಮಾತ್ರ ದಾಖಲಾತಿಗಳನ್ನು ಸಲ್ಲಿಸಿದ್ದು ಗೊತ್ತಾಯಿತು. ಬಳಿಕ ಎಲ್ಲ ಫಲಾನುಭವಿಗಳಿಂದಲೂ ದಾಖಲೆಗಳನ್ನು ಪಡೆದು, ಕ್ಷೇತ್ರ ವ್ಯಾಪ್ತಿಯಲ್ಲಿ ವಾಸವಾಗಿರುವ ಬಗ್ಗೆ ಮತ್ತು ಮನೆ ಇಲ್ಲದಿರುವ ಬಗ್ಗೆ ಖಚಿತಪಡಿಸಿಕೊಂಡು ಡಿಪಿಆರ್ ತಯಾರಿಸಿ ವಸತಿ ಸಮಿತಿ ಹಾಗೂ ಜಿಲ್ಲಾಧಿಕಾರಿ ಅನುಮೋದನೆಯೊಂದಿಗೆ ರಾಜೀವ್‌ಗಾಂದಿ ಗ್ರಾಮೀಣ ವಸತಿ ನಿಗಮಕ್ಕೆ ಸಲ್ಲಿಸಲಾಗಿತ್ತು. 2020ರಲ್ಲಿ ವಸತಿ ಇಲಾಖೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಬಳಿಕ ರಾಜೀವ್ ಗಾಂಧಿ ವಸತಿ ನಿಗಮ ತಾಂತ್ರಿಕ ಅನುಮೋದನೆ ಕೊಟ್ಟಿದೆ. ಕೋವಿಡ್ ಲಾಕ್‌ಡೌನ್‌ ಕಾರಣದಿಂದ ಮೊದಲ ಟೆಂಡರ್ ರದ್ದಾಗಿತ್ತು. ಏ.25ರಂದು ಎಜಿಜೆ ಕನ್‌ಸ್ಟ್ರಕ್ಸನ್‌ಗೆ ಕಾರ್ಯಾದೇಶ ಕೊಡಲಾಗಿದೆ’ ಎಂದು ವಿವರಿಸಿದರು.
ನಿಜವಾಗಿಯೂ ಅರ್ಹರಿಗೆ:
‘ನಿಜವಾಗಿಯೂ ಬಡವರ ಆಯ್ಕೆಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ಅರ್ಹ ಫಲಾನುಭವಿಗಳ ಆಯ್ಕೆಗೆ 2 ವರ್ಷ ಹಿಡಿಯಿತು. 36 ಮಂಗಳಮುಖಿಯರು, ಕಲಾವಿದರು, ಪೌರಕಾರ್ಮಿಕರು, ಮೇದಾರ ಕಾಲೊನಿಯವರು ಕೂಡ ಫಲಾನುಭವಿಗಳಾಗಿದ್ದಾರೆ. ಒಂದು ಕೊಠಡಿಯ ಮನೆಗಳು ಇವಾಗಿರಲಿವೆ. ಫಲಾನುಭವಿಗಳಿಗೆ ಸರ್ಕಾರದಿಂದ ಸಹಾಯಧನ ದೊರೆಯುತ್ತಿದೆ. ಬ್ಯಾಂಕ್‌ ಸಾಲದ ವ್ಯವಸ್ಥೆಯನ್ನೂ ಮಾಡಿಕೊಡುತ್ತಿದ್ದೇವೆ’ ಎಂದರು.
‘ಆಶ್ರಯ ಯೋಜನೆಯಡಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮನೆಗಳನ್ನು ಕಟ್ಟಿಕೊಡುತ್ತಿರುವುದು ಇಲ್ಲಿ ಇದೇ ಮೊದಲಾಗಿದೆ. ಶಾಸಕರಾದ ರಾಮದಾಸ್ ಹಾಗೂ ಎಲ್. ನಾಗೇಂದ್ರ ಕೂಡ ಯೋಜನೆ ರೂಪಿಸಿದ್ದಾರೆ. ಅವರೂ ಜಾಗಕ್ಕಾಗಿ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೇ ಬರಬೇಕು. ನಗರದಲ್ಲಿ ಜಾಗ ಲಭ್ಯವಿಲ್ಲದಿರುವುದು ಇದಕ್ಕೆ ಕಾರಣ’ ಎನ್ನುತ್ತಾರೆ ಅವರು.
ಮೇಯರ್‌ ಸುನಂದಾ ಪಾಲನೇತ್ರ, ಮಹಾನಗರಪಾಲಿಕೆ ಸದಸ್ಯರಾದ ನಿರ್ಮಲಾ ಹರೀಶ್, ಲಕ್ಷ್ಮಿ ಶಿವಣ್ಣ, ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಪಾಲ್ಗೊಂಡಿದ್ದರು.