ಮೈಸೂರು: ಉನ್ನತ ಶಿಕ್ಷಣದ ಪ್ರವೇಶವು ಅನೇಕ ಆಕಾಂಕ್ಷಿಗಳಿಗೆ ದೂರದ ಗುರಿಯಾಗಿ ಉಳಿದಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯಪಟ್ಟರು.
ಮಾನಸ ಗಂಗೋತ್ರಿಯ ಇಎಂಆರ್‌ಸಿ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘ, ಸಿ.ಎಸ್.ಐ.ಆರ್.-ಯು.ಜಿ.ಸಿ. ನೆಟ್ ತರಬೇತಿ ಕೇಂದ್ರ, ಆಂತರಿಕ ಗುಣಮಟ್ಟ ಖಾತರಿ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ‘ಸಂಶೋಧನಾ ವಿಧಾನಗಳು ಮತ್ತು ಪ್ರಕಟಣೆ’ ಎಂಬ ವಿಷಯದ ಕುರಿತು ಒಂದು ದಿನದ ಉಚಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ದೇಶದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಸಂಖ್ಯೆಯಲ್ಲಿ ವೇಗವಾಗಿ ಬೆಳೆಯುತ್ತಿವೆ. ಆದರೆ, ಉನ್ನತ ಶಿಕ್ಷಣ ಎಲ್ಲರಿಗೂ ಸಿಗುತ್ತಿಲ್ಲ. ಪದವೀಧರರ ಕಡಿಮೆ ಉದ್ಯೋಗಾವಕಾಶ, ಬೋಧನೆಯ ಕುಸಿತದ ಗುಣಮಟ್ಟ, ಕ್ಷೀಣಿಸುತ್ತಿರುವ ಅನುದಾನ, ನಿಧಿಗಳು ಮತ್ತು ಸಂಕೀರ್ಣ ನಿಯಂತ್ರಣ ನೀತಿಗಳಿಂದ ನಾನಾ ಸಮಸ್ಯೆಗಳು ತಲೆದೂರಿದೆ ಪ್ರಸ್ತುತ ಅಂಕಿ ಅಂಶವು 27.1% ರಷ್ಟಿದೆ, 2022 ರ ವೇಳೆಗೆ 32% ಅನ್ನು ಸಾಧಿಸುವ ಗುರಿ ಹೊಂದಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾಜದ ಆಶೋತ್ತರಗಳನ್ನು ಪೂರೈಸಲು ಮತ್ತು ಶೈಕ್ಷಣಿಕ ವ್ಯವಸ್ಥೆಯನ್ನು ಪರಿವರ್ತಿಸಲು ಪ್ರಯತ್ನಿಸುತ್ತಿವೆ ಎಂದರು.
ನಾವಿಂದು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ವರ್ಷವಿಡೀ ’ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ನಡೆಸಲಾಗುತ್ತಿದೆ. ಒಂದು ರಾಷ್ಟ್ರವಾಗಿ, ನಮ್ಮ ವೈಜ್ಞಾನಿಕ ಸಾಧನೆಗಳು ಭವಿಷ್ಯದ ಬಗ್ಗೆ ಹೊಸ ಭರವಸೆಯನ್ನು ಮೂಡಿಸಿದೆ. ಭಾರತದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಸಂಖ್ಯೆಯಲ್ಲಿ ವೇಗವಾಗಿ ಬೆಳೆಯುತ್ತಿವೆ. ಸುಮಾರು 52,000 ಕ್ಕೂ ಹೆಚ್ಚು ಸಂಸ್ಥೆಗಳನ್ನು ಹೊಂದಿದೆ. 2001ರ ಅಂಕಿಅಂಶಗಳಿಗೆ ಹೋಲಿಸಿದರೆ ಇದು ನಾಲ್ಕು ಪಟ್ಟು ಹೆಚ್ಚಾಗಿದೆ. ಇದು ಸಂತೋಷದ ಜೊತೆಗೆ ಹೊಸ ಸವಾಲುಗಳನ್ನು ಸೃಷ್ಟಿಸಿದೆ ಎಂದರು.
ಈ ಕಾರ್ಯಾಗಾರವು ಶಿಕ್ಷಣದಲ್ಲಿ ಗುಣಮಟ್ಟದ ಉತ್ತೇಜಿಸಲು ಸಂಶೋಧನೆ ಎಷ್ಟು ಮಹತ್ವದ ಪಾತ್ರವನ್ನು ವಹಿಸಿದೆ ಎಂಬುದನ್ನು ತಿಳಿಸಿಕೊಡುತ್ತದೆ. ಜೊತೆಗೆ ಸಂಶೋಧನಾ ವಿಧಾನದ ಬಗ್ಗೆ ಚರ್ಚಿಸುತ್ತದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಮೈಸೂರು ವಿಶ್ವವಿದ್ಯಾನಿಲಯ ನಾನಾ ಸಮಸ್ಯೆ ಸವಾಲಿನ ನಡುವೆಯೂ ಉತ್ತಮ ಕಾರ್ಯ ನಿರ್ವಹಣೆ ಮಾಡುತ್ತಿದೆ. ಕಳೆದ ವರ್ಷ ವಿವಿ ನ್ಯಾಕ್‌ನಿಂದ ‘ಎ’ ಗ್ರೇಡ್ ಮಾನ್ಯತೆ ಪಡೆದಿದೆ. ಇತ್ತೀಚೆಗೆ ಎನ್ ಐಆರ್ ಎನಿಂದ ವಿಶ್ವವಿದ್ಯಾನಿಲಯ ವಿಭಾಗದಲ್ಲಿ 33ನೇ ಸ್ಥಾನ ದೊರೆತಿದೆ. ಇನ್ನೂ ಉತ್ತಮ ಶ್ರೇಯಾಂಕಗಳನ್ನು ಗಳಿಸಬಹುದಿತ್ತು. ಆದರೆ ಅಧ್ಯಾಪಕರ ಕೊರತೆ ಹಾಗೂ ಸಂಶೋಧನಾ ಫಲಿತಾಂಶವು ವೇಗವಾಗಿ ಕುಸಿಯುತ್ತಿರುವುದು ಇದಕ್ಕೆ ಕಾರಣ ಎಂದರು.
ಕಾರ್ಯಾಗಾರದ ಉದ್ಘಾಟನೆಯನ್ನು ವಿಶ್ರಾಂತ ಕುಲಪತಿ ಪ್ರೊ.ಎಸ್.ಆರ್.ನಿರಂಜನ ನೆರವೇರಿಸಿದರು. ಆಶಯ ಭಾಷಣವನ್ನು ಭಾರತೀಯ ವಿಜ್ಞಾನ ಸಂಸ್ಥೆ ಮಾಜಿ ನಿರ್ದೇಶಕ ಪ್ರೊ. ಪಿ. ಬಲರಾಮ್ ನಡೆಸಿಕೊಟ್ಟರು. ಮನೋವಿಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ .ಜಿ.ವೆಂಕಟೇಶ್ ಕುಮಾರ್ ಹಾಗೂ ಐಕ್ಯೂಎಸಿ ನಿರ್ದೇಶಕ ಪ್ರೊ.ಎನ್.ಎಸ್.ಹರಿನಾರಾಯಣ ಭಾಗವಹಿಸಿದ್ದರು. ಪ್ರಾಧ್ಯಾಪಕ ಡಾ. ಕೆ.ಎನ್. ಅಮೃತೇಶ್, ಸಂಯೋಜಕ ಡಾ. ಜೆ. ಲೋಹಿತ್, ಮೈವಿವಿ ಸಂಶೋಧಕರ ಸಂಘದ ಅಧ್ಯಕ್ಷ ನಟರಾಜ್ ಶಿವಣ್ಣ ಇದ್ದರು.