ಮನೆ ರಾಜ್ಯ ಸಾಹಿತ್ಯ ಪ್ರತಿಕ್ರಿಯೆಯ ಸಾಧನೆ: ಪ್ರೊ.ಮುಜಾಫರ್‌ ಅಸಾದಿ

ಸಾಹಿತ್ಯ ಪ್ರತಿಕ್ರಿಯೆಯ ಸಾಧನೆ: ಪ್ರೊ.ಮುಜಾಫರ್‌ ಅಸಾದಿ

0

ಮೈಸೂರು(Mysuru): ಸಾಹಿತ್ಯವು ಪ್ರತಿಕ್ರಿಯೆಯ ಸಾಧನ ಮತ್ತು ಪ್ರತಿಭಟನೆಯ ರೂಪಕವಾಗಿದೆ. ಅದು ಕ್ಲಿಷ್ಟವಾಗಿರಬಾರದು. ಸರಳವಾಗಿರಬೇಕು ಮತ್ತು ಮನ ಮುಟ್ಟುವಂತಿರಬೇಕು ಎಂದು ಎಂದು ಮೈಸೂರು ವಿಶ್ವವಿದ್ಯಾಲಯ ಕಲಾ ನಿಕಾಯದ ಡೀನ್‌ ಪ್ರೊ.ಮುಜಾಫರ್‌ ಅಸಾದಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅನ್ವೇಷಣಾ ಸೇವಾ ಟ್ರಸ್ಟ್‌ ಸಹಯೋಗದಲ್ಲಿ ನಗರದ ಜೆಎಲ್‌ಬಿ ರಸ್ತೆಯ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅರಸು ಮಂಡಳಿಯ ಅಧ್ಯಕ್ಷ ಎಚ್‌ಎಂಟಿ ಲಿಂಗರಾಜೇ ಅರಸ್ ಸಂಪಾದಿಸಿರುವ ‘ಅರಸು ಚುಟುಕು ಹಿಲಾಲುಗಳು’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಹಿತ್ಯ ಯಾವುದಾದರೊಂದು ವಿಷಯವನ್ನು ಅಭಿವ್ಯಕ್ತಿಸಬೇಕು. ಮನಸ್ಸಿಗೆ ತಟ್ಟುವಾಗ ಬೇರೆ ಬೇರೆ ಅರ್ಥಗಳನ್ನು ಕೊಡುವಂತಿರಬೇಕು. ನನ್ನದೇ ಅಭಿ‍ಪ್ರಾಯವನ್ನು ಓದುತ್ತಿದ್ದೇನೆ ಎನಿಸಬೇಕು ಎಂದರು.

ನಾವೆಲ್ಲರೂ, ಕೇರಳ ಹಾಗೂ ಗುಜರಾತ್ ಮಾದರಿ ಬಗ್ಗೆಯೇ ಮಾತನಾಡುತ್ತೇವೆ; ಅಲ್ಲಿ ಬಹಳ ಮುಂದುವರಿದಿದೆ ಎಂದು ಹೇಳುತ್ತೇವೆ. ಆದರೆ, ಅವು ಸೀಮಿತವಾದ ಅಭಿವೃದ್ಧಿ ಮಾದರಿಗಳು. ಹಳೆ ಮೈಸೂರಿನ ಮಾದರಿಯು ಎಲ್ಲದಕ್ಕೂ ಮಾದರಿಯಾಗಿದೆ. ಮೈಸೂರು ಮಹಾರಾಜರು ಒಳಗೊಳ್ಳುವ ಸಮಾಜವನ್ನು ನಿರ್ಮಾಣ ಮಾಡಿದವರು. ಅಧಿಕಾರ ವಿಕೇಂದ್ರೀಕರಣ, ಮೀಸಲಾತಿ ಮೊದಲಾದವುಗಳ ಮೂಲಕ ದೊಡ್ಡ ಕೊಡುಗೆ ನೀಡಿದವರು. ಅದನ್ನು ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಮುಂದುವರಿಸಿದರು. ಅದರಿಂದ ನೂರಾರು, ಸಾವಿರಾರು ಹಿಂದುಳಿದ ವರ್ಗದವರು ರಾಜಕೀಯ ಅಧಿಕಾರ ಪಡೆಯಲು ಸಾಧ್ಯವಾಯಿತು ಎಂದು ಸ್ಮರಿಸಿದರು.

ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ‌ ಒಡೆಯರ್ ಮಾತನಾಡಿ, ಎಂ.ಜಿ.ಆರ್. ಅರಸು ಸಾಹಿತ್ಯ‌ ಕ್ಷೇತ್ರದೊಂದಿಗೆ ಅರಸು ಸಮಾಜದ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಅದು ಶ್ಲಾಘನೀಯವಾದುದು. ಆ.21ರಂದು ಅರಸು ಮಂಡಳಿಯ ಶತಮಾನೋತ್ಸವ ಸಮಾರಂಭ ‌ನಡೆಯಲಿದ್ದು, ಸಮಾಜದವರೆಲ್ಲರೂ ಭಾಗವಹಿಸಬೇಕು ಎಂದು ತಿಳಿಸಿದರು.

ರಾಜ್ಯಕ್ಕೆ ಅರಸು ಸಮುದಾಯದ ಕೊಡುಗೆ ಅಪಾರವಾಗಿದೆ. ಸಮಾಜದಲ್ಲಿ ನಡೆದಿರುವ ದೊಡ್ಡ ದೊಡ್ಡ ಸುಧಾರಣೆಗಳಲ್ಲಿ ಹಾಗೂ ಮಾದರಿ ಮೈಸೂರು ರೂಪುಗೊಳ್ಳುವಲ್ಲಿ ನಮ್ಮ ಸಮುದಾಯದ ಪಾತ್ರ ದೊಡ್ಡದು ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಲಯ ಅಧ್ಯಕ್ಷ ಬಿ.ಆರ್.ನಟರಾಜ ಜೋಯಿಸ್, ಸಂಪಾದಕ ಎಚ್‌ಎಂಟಿ ಲಿಂಗರಾಜೇ ಅರಸ್, ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಅಮರನಾಥ ರಾಜೇ ಅರಸ್ ಹಾಗೂ ಡಾ.ಎಂ.ಜಿ.ಆರ್.ಅರಸು ಪಾಲ್ಗೊಂಡಿದ್ದರು.