ಮನೆ ರಾಜ್ಯ ಉದಯವಾಣಿ ದಿನಪತ್ರಿಕೆ ಸಂಸ್ಥಾಪಕ ತೋನ್ಸೆ ಮೋಹನದಾಸ್‌ ಪೈ ನಿಧನ

ಉದಯವಾಣಿ ದಿನಪತ್ರಿಕೆ ಸಂಸ್ಥಾಪಕ ತೋನ್ಸೆ ಮೋಹನದಾಸ್‌ ಪೈ ನಿಧನ

0

ಮಣಿಪಾಲ (Manipal): ಉದಯವಾಣಿ ದಿನಪತ್ರಿಕೆ ಸಂಸ್ಥಾಪಕ ತೋನ್ಸೆ ಮೋಹನದಾಸ್ ಪೈ(89) ಅವರು ಭಾನುವಾರ ರಾತ್ರಿ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಟಿ.ಮೋಹನದಾಸ್ ಪೈ ಅವರು ಸಹೋದರರಾದ ಡಾ ಟಿ.ರಾಮದಾಸ್ ಪೈ, ಟಿ.ನಾರಾಯಣ ಪೈ, ಟಿ.ಅಶೋಕ್ ಪೈ, ಸಹೋದರಿಯರಾದ ವಸಂತಿ ಆರ್. ಶೆಣೈ, ಜಯಂತಿ ಪೈ, ಇಂದುಮತಿ ಪೈ, ಆಶಾ ಪೈ ಅವರನ್ನು ಅಗಲಿದ್ದಾರೆ.

ನಾಳೆ ಎಂಜಿಎಂ ಕಾಲೇಜಿನಲ್ಲಿ  ಮೋಹನದಾಸ್ ಪೈ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೋಹನ್ ದಾಸ್ ಎಂ ಪೈ  ಅವರು ಡಾ ಟಿ ಎಂ ಎ ಪೈ ಫೌಂಡೇಶನ್ ಹಾಗೂ ಎಂಜಿಎಂ ಕಾಲೇಜ್ ಟ್ರಸ್ಟ್ ನ ಅಧ್ಯಕ್ಷರಾಗಿದ್ದರು. ಮೋಹನ್ ದಾಸ್ ಎಂ  ಪೈ ನಿಧನ ಹಿನ್ನೆಲೆಯಲ್ಲಿ ನಾಳೆ ಡಾ ಟಿ ಎಂ ಎ ಪೈ ಫೌಂಡೇಶನ್ ನ ವಿದ್ಯಾಸಂಸ್ಥೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

1933ರ ಜೂ. 20ರಂದು ಜನಿಸಿದ ಮೋಹನದಾಸ್ ಪೈಯವರು ಡಾಟಿಎಂಎ ಪೈಯವರ ಹಿರಿಯ ಪುತ್ರ. ಇವರಿಗೆ ಮೂರು ವರ್ಷ ಆಗಿರುವಾಗ ತಂದೆಯವರು ಉಡುಪಿಯಿಂದ ಮಣಿಪಾಲಕ್ಕೆ ಸ್ಥಳಾಂತರವಾದ ಕಾರಣ ಇವರೂ ಮಣಿಪಾಲದಲ್ಲಿ ಬೆಳೆದರು. ತಂದೆಯವರು ಆರಂಭಿಸಿದ ಹೊಸ ಶಾಲೆಯಲ್ಲಿ(ಮಣಿಪಾಲ ಅಕಾಡೆಮಿ ಶಾಲೆ), ಉಡುಪಿಯ ಮೋಡರ್ನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಉಡುಪಿಯ ಬೋರ್ಡ್ ಹೈಸ್ಕೂಲ್‌ನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ಬಳಿಕ ತಂದೆಯವರು ನೂತನವಾಗಿ ಆರಂಭಿಸಿದ ಎಂಜಿಎಂ ಕಾಲೇಜಿನಲ್ಲಿ (1949-51) ಇಂಟರ್‌ಮೀಡಿಯೆಟ್ ಶಿಕ್ಷಣ ಪಡೆದರು.