ಲಖನೌ(Lucknow): 1ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯೊಬ್ಬಳು ಹಣದುಬ್ಬರದಿಂದ ತಾನು ಎದುರಿಸುತ್ತಿರುವ ‘ಕಷ್ಟಗಳ’ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾಳೆ.
ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬರ್‌ಮವು ಪಟ್ಟಣದ ಆರು ವರ್ಷ ವಯಸ್ಸಿನ ಕೃತಿ ದುಬೆ ಪ್ರಧಾನಿಗೆ ಹಿಂದಿಯಲ್ಲಿ ಬರೆದಿರುವ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಪತ್ರದಲ್ಲೇನಿದೆ ? : ನನ್ನ ಹೆಸರು ಕೃತಿ ದುಬೆ. ಒಂದನೇ ತರಗತಿಯಲ್ಲಿ ಓದುತ್ತಿದ್ದೇನೆ. ಮೋದಿ ಜೀ, ನೀವು ಬೆಲೆ ಏರಿಕೆಗೆ ಕಾರಣರಾಗಿದ್ದೀರಿ. ನನ್ನ ಪೆನ್ಸಿಲ್, ರಬ್ಬರ್ ಕೂಡ ತುಟ್ಟಿಯಾಗಿವೆ. ಮ್ಯಾಗಿ ದರವೂ ಹೆಚ್ಚಾಗಿದೆ. ನಾನೇನು ಮಾಡಲಿ? ಇತರ ಮಕ್ಕಳು ನನ್ನ ಪೆನ್ಸಿಲ್ ಕದಿಯುತ್ತಿದ್ದಾರೆ ಎಂದು ಬಾಲಕಿ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.
ಬಾಲಕಿಯ ತಂದೆ ವಿಶಾಲ್ ದುಬೆ ವಕೀಲರಾಗಿದ್ದು, ಇದು ನನ್ನ ಮಗಳ ‘ಮನ್ ಕಿ ಬಾತ್’. ಇತ್ತೀಚೆಗೆ ಮಗಳು ಶಾಲೆಯಲ್ಲಿ ಪೆನ್ಸಿಲ್ ಕಳೆದುಕೊಂಡಿದ್ದಕ್ಕೆ ಆಕೆಯನ್ನು ತಾಯಿ ಗದರಿದ್ದರು. ಹೀಗಾಗಿ ಅವಳು ತನ್ನ ಮನದ ಮಾತನ್ನು ಹೇಳಿಕೊಂಡಿದ್ದಾಳೆ ಎಂದು ಪ್ರತಿಕ್ರಿಯಿಸಿದ್ದಾರೆ.