ಮನೆ ರಾಜ್ಯ ಹೊಸ ಭಾರತದ ಉದಯಕ್ಕೆ ಸಂಸ್ಕೃತ ಅಡಿಪಾಯ: ಸುಬ್ರಮಣಿಯನ್‌ ಸ್ವಾಮಿ

ಹೊಸ ಭಾರತದ ಉದಯಕ್ಕೆ ಸಂಸ್ಕೃತ ಅಡಿಪಾಯ: ಸುಬ್ರಮಣಿಯನ್‌ ಸ್ವಾಮಿ

0

ಮೈಸೂರು(Mysuru): ಹೊಸ ಭಾರತದ ಉದಯಕ್ಕೆ ಸಂಸ್ಕೃತವೇ ಅಡಿಪಾಯವಾಗಲಿದೆ. ಆದ್ದರಿಂದ, ಮಾತೃಭಾಷೆಯ ಜೊತೆಗೆ 10ನೇ ತರಗತಿವರೆಗೆ ಸಂಸ್ಕೃತವನ್ನು ಕಲಿಸಬೇಕು ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಪ್ರತಿಪಾದಿಸಿದರು.

ಮಾನಸಗಂಗೋತ್ರಿಯ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ನಡೆದ 60ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿ, ಇಂಗ್ಲಿಷ್‌ನ ಜಾಗದಲ್ಲಿ ಸಂಸ್ಕೃತವು ಆಡಳಿತ– ಸಂವಹನ ಭಾಷೆಯಾಗಬೇಕು. ಇನ್ನೈವತ್ತು ವರ್ಷಗಳಲ್ಲಿ ಹಿಂದಿಯೇ ಸಂಸ್ಕೃತವಾಗಲಿದೆ ಎಂದು ಹೇಳಿದರು.

ಬ್ರಿಟಿಷರ ಶಿಕ್ಷಣ ಪದ್ಧತಿಯನ್ನೇ ಇನ್ನೂ ಅನುಸರಿಸುತ್ತಿದ್ದೇವೆ. ಸುಳ್ಳು ಇತಿಹಾಸವನ್ನು ಮಕ್ಕಳಿಗೆ ಬೋಧಿಸುತ್ತಿದ್ದೇವೆ. ಶಿಕ್ಷಕರಿಗೆ ಅಧಿಕಾರಿಗಳಿಗಿಂತ ಹೆಚ್ಚಿನ ಭತ್ಯೆ ನೀಡಬೇಕು. ಇಡೀ ಕ್ಷೇತ್ರವನ್ನು ಅಮೂಲಾಗ್ರವಾಗಿ ಬದಲಿಸಬೇಕು ಎಂದರು.

ಪೆರಿಯಾರ್‌ರ ದ್ರಾವಿಡ ಸಿದ್ಧಾಂತ ಬ್ರಿಟಿಷರ ವಸಹಾತುಶಾಹಿ ಮನಸ್ಥಿತಿಯಿಂದ ಹುಟ್ಟಿದ್ದಾಗಿದೆ. ಬ್ರಿಟಿಷರೇ ಆಳಬೇಕೆಂದು ಅವರು ಮನವಿ ಕೊಟ್ಟಿದ್ದರು. ಆರ್ಯರು ಹೊರಗಿನಿಂದ ಬಂದವರಲ್ಲ. ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ ಅಧ್ಯಯನ ವಿಭಾಗದ ಸಂಶೋಧನೆಯು ದೇಶದ ನಾಗರಿಕರ ವಂಶವಾಹಿಯೆಲ್ಲ ಒಂದೇ ಎಂದು ಹೇಳುತ್ತದೆ. ಹೀಗಾಗಿ ಇಲ್ಲಿನವರೆಲ್ಲರೂ ಹಿಂದೂಗಳೇ ಎಂದು ಅಭಿಪ್ರಾಯಪಟ್ಟರು.

ವರ್ಣ, ಜಾತಿಗಳು ವೃತ್ತಿ ಆಧರಿಸಿ ವಿಂಗಡಿಸಿದ್ದಾಗಿವೆ. ಯಾರೂ ಬೇಕಾದರೂ ಬ್ರಾಹ್ಮಣರಾಗುವ– ಕ್ಷತ್ರೀಯರಾಗುವ ಅವಕಾಶವಿದೆ. ಕ್ಷತ್ರೀಯ ವಿಶ್ವಾಮಿತ್ರ ಮಹರ್ಷಿಯಾಗಲಿಲ್ಲವೇ? ಸಂವಿಧಾನ ನೀಡಿದ ಅಂಬೇಡ್ಕರ್‌ ಕೂಡ ಬ್ರಾಹ್ಮಣರೇ ಎಂದರು.

ಜಿಡಿಪಿಯ (ನಿವ್ವಳ ಆಂತರಿಕ ಉತ್ಪನ್ನ) ಶೇ 10ರಷ್ಟು ಹಣವನ್ನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಖರ್ಚು ಮಾಡದ ಹೊರತು ಆರ್ಥಿಕತೆಯಲ್ಲಿ ಚೀನಾ, ಅಮೆರಿಕವನ್ನು ಹಿಂದಿಕ್ಕಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕೆಲವರು ನನ್ನ ಅನುಭವವನ್ನು ಬಳಸಿಕೊಳ್ಳುತ್ತಿಲ್ಲ. ನನಗೆ ಅಧಿಕಾರ ನೀಡಿದರೆ ಕಪ್ಪು ಹಣವನ್ನು ಭಾರತಕ್ಕೆ ತರುತ್ತೇನೆ. ಭ್ರಷ್ಟಾಚಾರವನ್ನು ಸಂಪೂರ್ಣ ಕಿತ್ತೊಗೆಯುತ್ತೇನೆ ಎಂದು ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದರು.