ಮನೆ ಕಾನೂನು ಮದ್ಯಪಾನದ ಕಾರಣಕ್ಕೆ ಶಿಸ್ತುಕ್ರಮ:  ಕರ್ತವ್ಯದಿಂದ ಬಿಡುಗಡೆಯಾಗಿದ್ದ ಯೋಧನಿಗೆ ಅಂಗವೈಕಲ್ಯ ಪಿಂಚಣಿ ನೀಡಿ: ಸುಪ್ರೀಂ

ಮದ್ಯಪಾನದ ಕಾರಣಕ್ಕೆ ಶಿಸ್ತುಕ್ರಮ:  ಕರ್ತವ್ಯದಿಂದ ಬಿಡುಗಡೆಯಾಗಿದ್ದ ಯೋಧನಿಗೆ ಅಂಗವೈಕಲ್ಯ ಪಿಂಚಣಿ ನೀಡಿ: ಸುಪ್ರೀಂ

0

ಮದ್ಯಪಾನಕ್ಕೆ ಆತುಕೊಂಡ ಕಾರಣಕ್ಕಾಗಿ ಶಿಸ್ತುಕ್ರಮ ಎದುರಿಸಿ ಕರ್ತವ್ಯದಿಂದ ಬಿಡುಗಡೆಯಾಗಿದ್ದ ಕಾರ್ಗಿಲ್‌ ಸಮರ ಯೋಧನೊಬ್ಬನಿಗೆ ಅಂಗವೈಕಲ್ಯ ಪಿಂಚಣಿ ನೀಡುವುದನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಕೇಂದ್ರ ಸರ್ಕಾರಕ್ಕೆ ಕಿವಿಮಾತು ಹೇಳಿದೆ.

[ಭಾರತ ಒಕ್ಕೂಟ ಮತ್ತು ನಾಗಿಂದರ್‌ ಸಿಂಗ್‌ ನಡುವಣ ಪ್ರಕರಣ].

ಪಿಂಚಣಿ ಮಂಜೂರು ಮಾಡುವುದರ ವಿರುದ್ಧ ಬಲವಾಗಿ ವಾದ ಮಂಡಿಸಲಾಗಿದ್ದರೂ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುವ ಸೈನಿಕರ ವಿಚಾರವನ್ನು ಮಾನವೀಯವಾಗಿ ನೋಡಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ತಿಳಿಸಿತು.

“ನಾವು ನ್ಯಾಯದ ಮಾನವೀಯ ಮುಖವನ್ನು ನೋಡಬೇಕು. ಈ ವ್ಯಕ್ತಿ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸಿದ್ದಾರೆ. ನಾವು ನ್ಯಾಯಾಧೀಶರು ಕೂಡ ಮನುಷ್ಯರು. ಶವಪೆಟ್ಟಿಗೆ ಒಯ್ಯುವುದನ್ನು ನೋಡಿದಾಗ ನಮಗೂ ನೋವಾಗುತ್ತದೆ…” ಎಂದು ನ್ಯಾ. ಚಂದ್ರಚೂಡ್‌ ಪ್ರತಿಕ್ರಿಯಿಸಿದರು.

ನಾವೀಗ ಅವರ ಪಿಂಚಣಿಗೆ ಅಡ್ಡಿಪಡಿಸಿದರೆ, ಅದು ಅವರ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಸೇವೆಯಿಂದ ಬಿಡುಗಡೆಗೊಂಡಿದ್ದ ಯೋಧ ನಾಗಿಂದರ್ ಸಿಂಗ್ ಅವರಿಗೆ ವಿಕಲಚೇತನರ ಪಿಂಚಣಿ ಮಂಜೂರು ಮಾಡಿದ್ದ ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಕೇಂದ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಮಾಧವಿ ದಿವಾನ್ ಅವರು ಸಶಸ್ತ್ರ ಪಡೆಗಳಲ್ಲಿ ಮದ್ಯ ವ್ಯಸನ ಗಂಭೀರ ಶಿಸ್ತಿನ ಸಮಸ್ಯೆಯಾಗಿದೆ. ಆದ್ದರಿಂದ ಪ್ರತಿವಾದಿ ಪಿಂಚಣಿಗೆ ಅರ್ಹರಲ್ಲ ಎಂದು ವಾದಿಸಿದರಾದರೂ ನ್ಯಾಯಾಲಯ ”ದಯವಿಟ್ಟು ಯತ್ನಿಸಿ. ಅವರಿಗೆ ವಿನಾಯಿತಿ ನೀಡಿ. ಆತನ ಕುಟುಂಬವನ್ನು ಗಮನಿಸಿ ವಿಶಾಲವಾಗಿ (ಪ್ರಕರಣವನ್ನು) ನೋಡಬೇಕು” ಎಂದು ಒತ್ತಾಯಿಸಿತು. ಬಳಿಕ ಕೇಂದ್ರ ಸರ್ಕಾರದಿಂದ ಸೂಚನೆ ಪಡೆಯುವಂತೆ ಎಎಸ್‌ಜಿ ಅವರಿಗೆ ತಿಳಿಸಿದ ಪೀಠ ಪ್ರಕರಣವನ್ನು ಮುಂದೂಡಿತು.