ಮನೆ ಸುದ್ದಿ ಜಾಲ ಕುಂಬಾರಕೊಪ್ಪಲಿನಲ್ಲಿ ಪಾದಯಾತ್ರೆ ನಡೆಸಿ ಕುಂದುಕೊರತೆ ಆಲಿಸಿದ ಶಾಸಕ ಎಲ್.ನಾಗೇಂದ್ರ

ಕುಂಬಾರಕೊಪ್ಪಲಿನಲ್ಲಿ ಪಾದಯಾತ್ರೆ ನಡೆಸಿ ಕುಂದುಕೊರತೆ ಆಲಿಸಿದ ಶಾಸಕ ಎಲ್.ನಾಗೇಂದ್ರ

0

ಮೈಸೂರು (Mysuru): ಇಂದು ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂಬಾರಕೊಪ್ಪಲಿನಲ್ಲಿ ಶಾಸಕ ಎಲ್‌.ನಾಗೇಂದ್ರ ಅವರು ಪಾದಯಾತ್ರೆ ನಡೆಸಿ ಸಾರ್ವಜನಿಕರಿಂದ ಕುಂದು ಕೊರತೆಗಳನ್ನು ಆಲಿಸಿದರು.

ಕುಂಬಾರಕೊಪ್ಪಲಿನ ಮಹದೇಶ್ವರ ದೇವಸ್ಥಾನದ ಬಳಿಯಿಂದ ಪಾದಯಾತ್ರೆ ಪ್ರಾರಂಭಿಸಿ ಕುಂಬಾರಕೊಪ್ಪಲು ಬಡಾವಣೆಯಾದ್ಯಂತ ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸಿದರು.

ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಲಾದ ಸಮುದಾಯ ಭವನದ ಮಹಡಿಯಲ್ಲಿ ಮಹಾನಗರಪಾಲಿಕೆಯಿಂದ ಕೊಠಡಿಯನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ಈ ಕಟ್ಟಡಕ್ಕೆ ಪಿಲ್ಲರ್ ಗಳಿಲ್ಲದಿರುವುದರಿಂದ ಕಾಂಕ್ರೀಟ್ ಪಿಲ್ಲರ್ ನಿರ್ಮಾಣ ಮಾಡಿ ನಂತರ ಕಾಮಗಾರಿ ನಡೆಸುವಂತೆ ಕೋರಿದರು. ಅಭಿವೃದ್ದಿ ಅಧಿಕಾರಿಯಾದ ಮನುಗೌಡ ಅವರಿಗೆ ನಿರ್ದೇಶನ ನೀಡಿ ಕಟ್ಟಡದ ಸುಸ್ಥಿತಿ ಕುರಿತು ವರದಿ ಪಡೆದು ನಂತರ ಸೂಕ್ತ ಕಾಮಗಾರಿ ನಿರ್ವಹಿಸಲು ಸೂಚಿಸಿದರು.

ರಸ್ತೆ ಅಭಿವೃದ್ಧಿ ಪಡಿಸುವಂತೆ ಕೋರಿದರು. ಈ ವೇಳೆ ಶಾಸಕರು ಅಭಿವೃದ್ದಿ ಅಧಿಕಾರಿ ಹಾಗೂ ಇಂಜಿನಿಯರಿಗೆ ನಿರ್ದೇಶನ ನೀಡಿ ಎಲ್ಲ ರಸ್ತೆಗಳ ಅಭಿವೃದ್ದಿ ಪಡಿಸಲು ಅಂದಾಜು ಪಟ್ಟಿ ತಯಾರಿಸುವಂತೆ, ಈ ಕಾಮಗಾರಿಗಳನ್ನು ಮಹಾನಗರಪಾಲಿಕೆ ನಿಧಿಯಿಂದ ಹಾಗೂ ಶಾಸಕರ ನಿಧಿಯಿಂದ ಅನುದಾನ ನೀಡಿ ಎಲ್ಲ ರಸ್ತೆಗಳನ್ನು ಅಭಿವೃದ್ದಿಗೊಳಿಸಿ ಅಗತ್ಯವಿರುವ ಕಡೆ ಇಂಟರ್ ಲಾಕ್ ಹಾಕಿ ಅಭಿವೃದ್ದಿಗೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಈ ಕಾಲೋನಿಯಲ್ಲಿ ಕೊಳಗೇರಿ ಅಭಿವೃದ್ದಿ ಮಂಡಳಿಯಿಂದ ನಿರ್ಮಿಸಲಾದ ಕಾಂಪ್ಲೆಕ್ಸ್‌ ಗಳಲ್ಲಿ ವಿದ್ಯುತ್ ಸಂಪರ್ಕ ಸರಿಯಿಲ್ಲದೇ ಕೇಬಲ್ ಗಳು ತುಂಡಾಗಿರುವುದನ್ನು ಗಮನಿಸಿ ಮಹಾನಗರಪಾಲಿಕೆ ಎಲಕ್ಟ್ರಿಕಲ್ ವಿಭಾಗ ಹಾಗೂ ಚೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿ 15 ದಿವಸದೊಳಗಾಗಿ ಈ ಕಾಮಗಾರಿಗಳನ್ನು ನಿರ್ವಹಿಸಿ ಮಾಹಿತಿ ನೀಡುವಂತೆ ಸೂಚನೆ ನೀಡಿದರು. ಈ ಮನೆಗಳ ಸಂಕೀರ್ಣದಲ್ಲಿ ಸಂಪ್ ದುರಸ್ತಿ, ಮೋಟರ್ ಅಳವಡಿಕೆ, ಮೇಲ್ಚಾವಣಿ ಟ್ಯಾಂಕ್ ಅಳವಡಿಸಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಾರ್ವಜನಿಕರು ತಿಳಿಸಿದರು. ಸ್ಥಳದಲ್ಲಿ ಹಾಜರಿದ್ದ ವಾಣಿವಿಲಾಸ ಅಭಿಯಂತರರಿಗೆ ಸೂಚನೆ ನೀಡಿ ಮೇನ್ ಲೈನ್ ಲಿಂಕ್ ಮಾಡುವುದು, ಎಲ್ಲ ಮನೆಗಳಿಗೂ ಹೊಸ ಸಂಪರ್ಕ ನೀಡಲು ಪೈಪ್ ಲೈನ್ ಅಳವಡಿಸಲು ಅಂದಾಜು ಪಟ್ಟಿ ತಯಾರಿಸಿ ಕೂಡಲೇ ಕಾಮಗಾರಿ ಪ್ರಾರಂಭಿಸಲು ಸೂಚಿಸಿದರು.

ಕೊಳಗೇರಿ ಅಭಿವೃದ್ದಿ ಮಂಡಳಿ ಕಾಂಪ್ಲೆಕ್ಸಗಳಲ್ಲಿ ವಾಸ ಮಾಡುತ್ತಿರುವವರಿಗೆ ಹಕ್ಕು ಪತ್ರ ನೀಡಲು ಈಗಾಗಲೇ ಆಶ್ರಯ ಸಮಿತಿಯಲ್ಲಿ ಚರ್ಚಿಸಿ ಹಸ್ತಾಂತರಿಸಲು ಸೂಚನೆ ನೀಡಲಾಗಿದೆ. ಆಗಸ್ಟ್ 4 ರಂದು ಹಸ್ತಾಂತರಿಸಲು ಕ್ರಮಕೈಗೊಂಡಿದ್ದು, ಶೀಘ್ರದಲ್ಲಿಯೇ ಎಲ್ಲರಿಗೂ ಹಕ್ಕುಪತ್ರ ನೀಡಲಾಗುವುದೆಂದು ತಿಳಿಸಿದರು.

ಮಳೆ ನೀರು ಚಂರಂಡಿಯಲ್ಲಿ ಹೂಳು ತುಂಬಿರುವುದನ್ನು ಪರಿಶೀಲಿಸಿ ಕೂಡಲೇ ಈ ಮೋರಿಯಲ್ಲಿರುವ ಹೂಳನ್ನು ತೆಗೆದು ರಕ್ಷಣಾ ಗೋಡೆ ನಿರ್ಮಾಣಕ್ಕೆ ಕ್ರಮಕೈಗೊಳ್ಳುವಂತೆ ಹಾಜರಿದ್ದ ವಲಯ ಆಯುಕ್ತರಿಗೆ ಸೂಚಿಸಿದರು. ಹಲವಾರು ನಿರ್ಗತಿಕರು, ಬಡವರು, ವಿಧವೆಯರು, ವಯೋವೃದ್ದರು ಪಿಂಚಣಿ ಮಾಡಿಸಿಕೊಡಲು ಕೋರಲಾಗಿ ಸ್ಥಳದಲ್ಲಿ ಹಾಜರಿದ್ದ ರಾಜಸ್ವ ನಿರೀಕ್ಷಕರಿಗೆ ಸೂಚನೆ ನೀಡಿ ಈ ಕಾಲೋನಿಯ ಎಲ್ಲ ಮನೆಗೂ ಭೇಟಿ ನೀಡಿ ಅರ್ಹರಿಗೆ ಕೂಡಲೇ ಅವರಿಗೆ ಅನ್ವಯವಾಗುವ ಪಿಂಚಣಿಯನ್ನು ಮಂಜೂರು ಮಾಡಲು ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.

ಈ ಕಾಲೋನಿಯಲ್ಲಿ ಹಲವಾರು ಬಡವರು ನಿವೇಶನಹೊಂದಿದ್ದು ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗದಿರುವವರಿಗೆ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯಿಂದ ಸರ್ವೆ ಕಾರ್ಯ ನಡೆಸಲಾಗಿದ್ದು, ಅರ್ಹರಿಗೆ ಫಲಾನುಭವಿ ವಂತಿಗೆ ರೂ:48,000 ಗಳನ್ನು ಮಂಡಳಿಗೆ ಪಾವತಿಸಿದಲ್ಲಿ ಅವರಿಗೆ ರೂ.4,98,000 ವೆಚ್ಚದಲ್ಲಿ ಮೂರುಕಾಲು ಚದರದ ಮನೆಯನ್ನು ನಿರ್ಮಾಣ ಮಾಡಲು ಕ್ರಮವಹಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಅಧಿಕಾರಿಗಳು, ವಾಣಿವಿಲಾಸ, ಚೆಸ್ಕಾಂ, ಕೊಳಗೇರಿ ಮಂಡಳಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಆಶ್ರಯ ಶಾಖೆ, ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಮಹಾನಗರಪಾಲಿಕೆ ಸದಸ್ಯ ಚಿಕ್ಕವೆಂಕಟು, ಬಿಜೆಪಿ ಉಪಾಧ್ಯಕ್ಷ ಕುಮಾರಗೌಡ, ಬಿ.ಎಲ್.ಎ-1 ದಿನೇಶ್ ಗೌಡ, ವಾರ್ಡ್ ಅಧ್ಯಕ್ಷ ನರಸಿಂಹಮೂರ್ತಿ, ಆರಾಧನಾ ಸಮಿತಿ ಸದಸ್ಯ ಭೈರಪ್ಪ, ಅಶ್ವಥ, ಪ್ರಮೋದ ಮತ್ತಿತರರು ಉಪಸ್ಥಿತರಿದ್ದರು.