ಮನೆ ರಾಜ್ಯ ಸುಬ್ರಹ್ಮಣ್ಯದಲ್ಲಿ ಧಾರಾಕಾರ ಮಳೆಗೆ ಗುಡ್ಡ ಕುಸಿತ: ಮಣ್ಣಿನಡಿ ಸಿಲುಕಿ ಇಬ್ಬರು ಮಕ್ಕಳು ಸಾವು

ಸುಬ್ರಹ್ಮಣ್ಯದಲ್ಲಿ ಧಾರಾಕಾರ ಮಳೆಗೆ ಗುಡ್ಡ ಕುಸಿತ: ಮಣ್ಣಿನಡಿ ಸಿಲುಕಿ ಇಬ್ಬರು ಮಕ್ಕಳು ಸಾವು

0

ಸುಬ್ರಹ್ಮಣ್ಯ (Subrahmanya): ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕುಮಾರಧಾರ ಸ್ನಾನ ಘಟ್ಟ ಸಮೀಪದ ಪರ್ವತಮುಖಿಯಲ್ಲಿ ಗುಡ್ಡ ಕುಸಿದು ಇಬ್ಬರು ಬಾಲಕಿಯರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ.

ಶ್ರುತಿ (11) ಹಾಗೂ ಜ್ಞಾನಶ್ರೀ (6) ಮೃತಪಟ್ಟ ಬಾಲಕಿಯರು. ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಬಾಲಕಿಯರ ಮೃತದೇಹವನ್ನು ಹೊರತೆಗೆಯಲಾಗಿದೆ.

ಬಾಲಕಿಯರ ಮೃತದೇಹವನ್ನು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ರಾತ್ರಿ ಮಣ್ಣಿನಿಂದ ಹೊರತೆಗೆಯಲಾಗಿದೆ. ಬಾಲಕಿಯರು ಸ್ಥಳೀಯ ವರ್ತಕ ಕುಸುಮಾಧರ– ರೂಪಶ್ರೀ ದಂಪತಿಯ ಮಕ್ಕಳು. ಸೋಮವಾರ ರಾತ್ರಿ 7.30ರ ಸುಮಾರಿಗೆ ಗುಡ್ಡ ಕುಸಿತದಿದೆ. ಈ ವೇಳೆ ಕುಸುಮಾಧರ ಅವರ ಪತ್ನಿ ರೂಪಶ್ರೀ ನಾಲ್ಕು ತಿಂಗಳ ಮಗುವನ್ನು ಹಿಡಿದುಕೊಂಡು ಮನೆಯಿಂದ ಹೊರಗೆ ಓಡಿಬಂದಿದ್ದಾರೆ.  ಶ್ರುತಿ ಹಾಗೂ ಜ್ಞಾನಶ್ರೀ ಮನೆಯಿಂದ ಹೊರಗೆ ಓಡಿ ಬರುವಷ್ಟರಲ್ಲಿ ಗುಡ್ಡ ಕುಸಿದು ಮಕ್ಕಳು ಮಣ್ಣಿನಡಿ ಸಿಲುಕಿದ್ದರು.

ಈ ಪ್ರದೇಶ ಜಲಾವೃತಗೊಂಡು ಪಂಜ– ಸುಬ್ರಹ್ಮಣ್ಯ ರಸ್ತೆಯ ಸಂಪರ್ಕ ಕಡಿತಗೊಂಡಿದ್ದರಿಂದ ತಕ್ಷಣ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ. ಈ ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕ ಕಡಿತದಿಂದ ಸಂಪೂರ್ಣ ಕತ್ತಲಾವರಿಸಿತ್ತು. ನೀರಿನ ಹರಿವು ಕಡಿಮೆಯಾದ ಬಳಿಕ ಜೆಸಿಬಿ ಕರಿಸಿ ಕಾರ್ಯಾಚರಣೆ ಪ್ರಾರಂಭಿಸಿ ಮಣ್ಣನ್ನು ಸರಿಸುವಷ್ಟರಲ್ಲಿ ಮಕ್ಕಳಿಬ್ಬರು ಮೃತಪಟ್ಟಿದ್ದರು. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಶ್ರುತಿ ಸುಬ್ರಹ್ಮಣ್ಯದ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಹಾಗೂ ಜ್ಞಾನಶ್ರೀ ಕುಮಾರಸ್ವಾಮಿ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಕುಸುಮಾಧರ ಅವರು ಸರ್ಕಾರಿ ಆಸ್ಪತ್ರೆ ಬಳಿ ಅಂಗಡಿಯನ್ನು ಹೊಂದಿದ್ದಾರೆ. ಮನೆ ಗುಡ್ಡದ ಪಕ್ಕದಲ್ಲೇ ಇದೆ. ಮತ್ತೊಂದು ಮನೆಯನ್ನು ಕಟ್ಟುವ ಸಲುವಾಗಿ ಅವರು ಗುಡ್ಡದ ತಳಭಾಗವನ್ನು ಅಗೆಸಿದ್ದರು.