ಮನೆ ಕ್ರೀಡೆ ಕಾಮನ್‌ ವೆಲ್ತ್‌ ಕ್ರೀಡಾಕೂಟ: ಟೇಬಲ್‌ ಟೆನ್ನಿಸ್‌ ನಲ್ಲಿ ಚಿನ್ನ, ಬೆಳ್ಳಿ ಗೆದ್ದ ವಿಕಾಸ್

ಕಾಮನ್‌ ವೆಲ್ತ್‌ ಕ್ರೀಡಾಕೂಟ: ಟೇಬಲ್‌ ಟೆನ್ನಿಸ್‌ ನಲ್ಲಿ ಚಿನ್ನ, ಬೆಳ್ಳಿ ಗೆದ್ದ ವಿಕಾಸ್

0

ಬರ್ಮಿಂಗ್‌ ಹ್ಯಾಂ (Birmingham)ಕಾಮನ್‌ವೆಲ್ತ್ ಗೇಮ್ಸ್‌ 2022ರಲ್ಲಿ ಭಾರತದ ಪದಕ ಬೇಟೆ ಮುಂದೂವರೆದಿದ್ದು‌, ಟೇಬಲ್ ಟೆನ್ನಿಸ್ ನಲ್ಲಿ ಭಾರತ ಪುರುಷರ ತಂಡ ಚಿನ್ನದ ಪದಕ ಗೆದ್ದುಕೊಂಡಿದೆ. ವೇಯ್ಟ್ ಲಿಫ್ಟಿಂಗ್ ನಲ್ಲಿ ವಿಕಾಸ್ ಠಾಕೂರ್ ಬೆಳ್ಳಿ ಪದಕ ಗೆದ್ದಿದ್ದಾರೆ. ಇದರೊಂದಿಗೆ ಭಾರತ ಒಟ್ಟಾರೆ 12 ಪದಕ ಗೆದ್ದಿದೆ.

ಪುರುಷರ ಟೇಬಲ್ ಟೆನ್ನಿಸ್ ನ ಅಂತಿಮ ಪಂದ್ಯದಲ್ಲಿ ಭಾರತ 3-1 ರಿಂದ  ಸಿಂಗಾಪುರವನ್ನು ಸೋಲಿಸಿತು. ಭಾರತದ ಪರ ಹರ್ಮೀತ್ ದೇಸಾಯಿ ಮತ್ತು ಜಿ ಸತ್ಯನ್ ಡಬಲ್ಸ್ ಪಂದ್ಯದಲ್ಲಿ ಗೆಲುವನ್ನು ದಾಖಲಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ನೀಡಿದರು. ಇದೇ ವೇಳೆ ಚೆವ್ ಝೆ ಯು ಕ್ಲಾರೆನ್ಸ್ ಮುಂದಿನ ಪಂದ್ಯ ಗೆದ್ದು ಸಿಂಗಾಪುರವನ್ನು 1-1 ರಲ್ಲಿ ಸಮಬಲಗೊಳಿಸಿದರು. ನಂತರದ ಪಂದ್ಯಗಳಲ್ಲಿ ಜಿ.ಸತ್ಯನ್ ಮತ್ತು ಹರ್ಮೀತ್ ದೇಸಾಯಿ ತಮ್ಮ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತಕ್ಕೆ ಚಿನ್ನವನ್ನು ಖಚಿತಪಡಿಸಿದರು.

ವೇಟ್‌ಲಿಫ್ಟಿಂಗ್‌ ನ ಪುರುಷರ 96 ಕೆಜಿ ವಿಭಾಗದಲ್ಲಿ ವಿಕಾಸ್ ಠಾಕೂರ್ ಬೆಳ್ಳಿ ಪದಕವನ್ನು ಗೆದ್ದರು. ವಿಕಾಸ್‌ ಠಾಕೂರ್‌ ಒಟ್ಟಾರೆ 346 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಜಯಿಸಿದರು. ಸ್ನ್ಯಾಚ್‌ ವಿಭಾಗದಲ್ಲಿ ಗರಿಷ್ಠ 155 ಕೆಜಿ ಭಾರ ಎತ್ತಿದರೆ, ಕ್ಲೀನ್‌ ಆಂಡ್‌ ಜರ್ಕ್‌ನಲ್ಲಿ ಗರಿಷ್ಠ 191 ಕೆಜಿ ಭಾರ ಎತ್ತುವ ಮೂಲಕ ಪದಕ ಗೆದ್ದರು.

ಕಾಮನ್ವೆಲ್ತ್ ಗೇಮ್ಸ್ ನ ಅಪರೂಪದ ಕ್ರೀಡೆಯಾದ ಲಾನ್ ಬೌಲ್ಸ್  ನಲ್ಲಿ ಭಾರತದ ಮಹಿಳೆಯರ ತಂಡ ಮೊದಲ ಬಾರಿ ಚಿನ್ನ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಇಂದು ನಡೆದ ಲಾನ್‌ ಬೌಲ್ಸ್ ಪಂದ್ಯದ ಫೈನಲ್‌ನಲ್ಲಿ ಭಾರತದ ವನಿತಾ ತಂಡ ದಕ್ಷಿಣ ಆಫ್ರಿಕಾವನ್ನು 17-10 ಅಂತರದಿಂದ ಮಣಿಸಿ ಐತಿಹಾಸಿಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.