ಮನೆ ಸುದ್ದಿ ಜಾಲ ಸಾಂಸ್ಕೃತಿಕ ಕಂಪು ಎಲ್ಲಡೆ ಪಸರಿಸಲಿ: ಕುಲಸಚಿವ ಪ್ರೊ.ಆರ್.ಶಿವಪ್ಪ

ಸಾಂಸ್ಕೃತಿಕ ಕಂಪು ಎಲ್ಲಡೆ ಪಸರಿಸಲಿ: ಕುಲಸಚಿವ ಪ್ರೊ.ಆರ್.ಶಿವಪ್ಪ

0
https://www.youtube.com/channel/UCmDoYGj_oDaxpT_t7Pa9iEQ

ಮೈಸೂರು (Mysuru): ಮಾನಸಯಾನದ ಮೂಲಕ ಕಲೆ, ಸಾಹಿತ್ಯ, ನೃತ್ಯದ ಸಾಂಸ್ಕೃತಿಕ ಕಂಪು ಎಲ್ಲೆಡೆ ಪಸರಿಸಲಿ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಆರ್.ಶಿವಪ್ಪ ಹೇಳಿದರು.

ಮಾನಸಗಂಗೋತ್ರಿಯ ಕ್ಲಾಕ್ ಟವರ್ ಬಳಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ 75ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವ ಪ್ರಯುಕ್ತ ನಡೆದ ಮಾನಸಯಾನ-2022 ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನ ಮಂತ್ರಿಗಳು 75ನೇ ಅಮೃತ ಮಹೋತ್ಸವನ್ನು ಇಡೀ ದೇಶವೇ ಸಡಗರದಿಂದ ಆಚರಿಸಬೇಕು ಮತ್ತು ಸಾಲು ಸಾಲು ಕಾರ್ಯಕ್ರಮಗಳನ್ನು ಮಾಡಬೇಕೆಂದು ಕರೆಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಮಾನಸಯಾನ ಕಾರ್ಯಕ್ರಮವು 75ನೇ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಕಾರ್ಯಕ್ರಮಗಳಿಗೆ ಅಡಿಪಾಯವಾಗಿದೆ. ಇದರ ಕೀರ್ತಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಕ್ಕೆ ಸಲ್ಲುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ ಡೊಳ್ಳು ಚಿತ್ರದ ನಿರ್ದೇಶಕರಾದ ಸಾಗರ್ ಪುರಾಣಿಕ್ ಹಾಗೂ ತಲೆದಂಡ ಚಿತ್ರದ ನಿರ್ದೇಶಕರಾದ ಪ್ರವೀಣ್ ಕೃಪಾಕರ್ ಅವರನ್ನು ಸನ್ಮಾನಿಸಲಾಯಿತು. ಈ ಸುಸಂದರ್ಭದಲ್ಲಿ ತಲೆದಂಡ ಚಿತ್ರದ ನಿರ್ಮಾಪಕರು ದಿ.ಸಂಚಾರಿ ವಿಜಯ್ ಅವರನ್ನು ಸ್ಮರಿಸಿದರು. ಮಿಮಿಕ್ರಿ ಶ್ಯಾಮ್ ರವರು ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಧ್ವನಿಯನ್ನು ಅನುಕರಣೆ ಮಾಡಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾದರು.

ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರಾದ ಎಂ.ಎಸ್.ಸಪ್ನಾ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಗುರುಸಿದ್ದಯ್ಯ, ಆಡಳಿತ ಅಧಿಕಾರಿ ಪ್ರೊ. ಪಿ ಮಾದೇಶ್, ಐ ಸಿ ಟಿ ಕೋ ಆರ್ಡಿನೇಟರ್ ಡಾ. ನವೀನ್ ಮೌರ್ಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ. ಸಿ.ಕೆ.ಪುಟ್ಟಸ್ವಾಮಿ, ಸಹ ಪ್ರಾಧ್ಯಾಪಕರಾದ ಡಾ. ಎನ್.ಮಮತಾ, ಕಾರ್ಯಕ್ರಮ ಸಂಯೋಜಕರಾದ ಎನ್.ಅಭಿಷೇಕ್, ವಿಭಾಗದ ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.‌