ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಲಕ್ಷ್ಯ ಸೇನ್ ಚಿನ್ನದ ಪದಕ ಗೆದ್ದಿದ್ದಾರೆ.
ಲಕ್ಷ್ಯ ಸೇನ್ , ಟ್ಜೆ ಯೋಂಗ್ ಎನ್‌ಜಿ ಅವರನ್ನು 19-21, 21-9, 21-16 ಸೆಟ್ ಗಳಿಂದ ಸೋಲಿಸಿದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದ ಯುವ ಆಟಗಾರ ಯೂತ್ ಒಲಿಂಪಿಕ್ ಗೇಮ್ಸ್ ಬೆಳ್ಳಿ ಪದಕ ವಿಜೇತರಾಗಿದ್ದು, ಈ ವರ್ಷದ ಆರಂಭದಲ್ಲಿ ಭಾರತದ ಐತಿಹಾಸಿಕ ಥಾಮಸ್ ಕಪ್ ಗೆಲುವಿನಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದರು.
ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ನಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಇಂಗ್ಲೆಂಡ್ ನ ಲೇನ್-ವೆಂಡಿ ಜೋಡಿಯ ವಿರುದ್ಧ ಜಯ ಗಳಿಸಿದ್ದು ಚಿನ್ನದ ಪದಕ ಗೆದ್ದಿದ್ದಾರೆ.
ಇನ್ನು ಟೇಬಲ್ ಟೆನ್ನೀಸ್ ನ ಸಿಂಗಲ್ಸ್ ವಿಭಾಗದಲ್ಲಿ ಶರತ್ ಕಮಲ್ ಇಂಗ್ಲೆಂಡ್ ನ ಲಿಯಾಮ್ ಪಿಚ್ಫೋರ್ಡ್ ನ್ನು ಫೈನಲ್ಸ್ ನಲ್ಲಿ 4-1 ಅಂತರದಿಂದ ಮಣಿಸಿ ಸ್ವರ್ಣ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಪ್ಯಾಡ್ಲರ್ ಸತ್ಯನ್ ಜ್ಞಾನಶೇಖರನ್ ಕಂಚಿನ ಪದಕ ಗೆದ್ದಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಇಲ್ಲಿಯವರೆಗೂ ಭಾರತಕ್ಕೆ ಒಟ್ಟು ಒಟ್ಟು 60 ಪದಕಗಳು ಬಂದಿದ್ದು 22 ಚಿನ್ನ, 15 ಬೆಳ್ಳಿ ಹಾಗೂ 23 ಕಂಚು ಸೇರಿದೆ.