ಮನೆ ರಾಜ್ಯ ಆಲಮಟ್ಟಿ ಜಲಾಶಯ ಶೇ.95 ರಷ್ಟು ಭರ್ತಿ: 1 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ

ಆಲಮಟ್ಟಿ ಜಲಾಶಯ ಶೇ.95 ರಷ್ಟು ಭರ್ತಿ: 1 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ

0

ಆಲಮಟ್ಟಿ (Almatti): ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಡ್ಯಾಂಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯ ಶೇ.95ರಷ್ಟು ಭರ್ತಿಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ 1 ಲಕ್ಷ ಕ್ಯುಸೆಕ್‌ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ರಾಜ್ಯದ ಬೆಳಗಾವಿ ಸೇರಿದಂತೆ ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ಸೋಮವಾರವೂ ಮುಂದುವರೆದಿದ್ದು ಆಲಮಟ್ಟಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಮತ್ತಷ್ಟೂ ಏರಿಕೆ ಕಾಣುವ ನಿರೀಕ್ಷೆ ಇದೆ. ಈ ಹಿನ್ನಲೆಯಲ್ಲಿ ಆಲಮಟ್ಟಿ ಜಲಾಶಯದಿಂದ ನದಿ ಪಾತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ.

ಗರಿಷ್ಠ 519.60 ಮೀಟರ್‌ ಎತ್ತರದಲ್ಲಿ 123.081 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯದ ಜಲಾಶಯದಲ್ಲಿ ಸೋಮವಾರ ಸಂಜೆ 519.31 ಮೀಟರ್‌ ಎತ್ತರದಲ್ಲಿ 118.052 ಟಿಎಂಸಿ ನೀರು ಸಂಗ್ರಹವಾಗಿತ್ತು. ಒಳ ಹರಿವಿನ ಪ್ರಮಾಣ 74,977 ಕ್ಯುಸೆಕ್‌ ಇದ್ದು, 1 ಲಕ್ಷ ಕ್ಯುಸೆಕ್‌ ನೀರನ್ನು ನದಿ ಪಾತ್ರಕ್ಕೆ ಹರಿಬಿಡಲಾಗುತ್ತಿತ್ತು.

ಆಲಮಟ್ಟಿ ಜಲಾಶಯದ ಬಲ ಬದಿಯಲ್ಲಿರುವ ವಿದ್ಯುದಾಗಾರದ ಮೂಲಕ 45 ಸಾವಿರ ಕ್ಯುಸೆಕ್‌ ಹಾಗೂ ಜಲಾಶಯದ 26 ಗೇಟ್‌ಗಳ ಪೈಕಿ 24 ಗೇಟ್‌ಗಳಿಂದ 55 ಸಾವಿರ ಕ್ಯುಸೆಕ್‌ ಸೇರಿ ಒಟ್ಟು 1 ಲಕ್ಷ ಕ್ಯುಸೆಕ್‌ ನೀರನ್ನು ನದಿ ಪಾತ್ರಕ್ಕೆ ಹರಿಬಿಡಲಾಗುತ್ತಿದೆ.