ಮನೆ ರಾಜ್ಯ ಶ್ರೀ ಗುರು ರಾಘವೇಂದ್ರ ರಾಯರ 351ನೇ ಆರಾಧನಾ ಮಹೋತ್ಸವಕ್ಕೆ ಮಂತ್ರಾಲಯ ಸಜ್ಜು : ಇಂದಿನಿಂದ ಆರಾಧನಾ...

ಶ್ರೀ ಗುರು ರಾಘವೇಂದ್ರ ರಾಯರ 351ನೇ ಆರಾಧನಾ ಮಹೋತ್ಸವಕ್ಕೆ ಮಂತ್ರಾಲಯ ಸಜ್ಜು : ಇಂದಿನಿಂದ ಆರಾಧನಾ ಸಂಭ್ರಮ

0

ರಾಯಚೂರು (Raichur): ಶ್ರೀ ಕ್ಷೇತ್ರ ಮಂತ್ರಾಲಯದ ಶ್ರೀ ಗುರು ರಾಘವೇಂದ್ರರ 351ನೇ ಆರಾಧನಾ ಮಹೋತ್ಸವಕ್ಕೆ ಮಂತ್ರಾಲಯ ಕ್ಷೇತ್ರ ಸಜ್ಜುಗೊಂಡಿದೆ.

ಕೋವಿಡ್‌ ಕಳೆದ ನಂತರ ನಡೆಯುತ್ತಿರುವ ರಾಯರ ಆರಾಧನೆ ಇದಾಗಿದೆ. ಹೀಗಾಗಿ ಲಕ್ಷಾಂತರ ಭಕ್ತರು ಆರಾಧನೆಗೆ ಆಗಮಿಸುವ ನಿರೀಕ್ಷೆ ಇದೆ.

ಆರಾಧನಾ ಮಹೋತ್ಸವವು ಆ.12ರಿಂದ ಮೂರು ದಿನ ನಡೆಯಲಿದೆ. ಇಂದು (ಆ.10) ಸಂಜೆ 7ಕ್ಕೆ ಪೀಠಾಧಿಪತಿಗಳು ಧ್ವಜಾರೋಹಣ, ಗೋಪೂಜೆ, ಧಾನ್ಯ ಪೂಜೆ ಸೇರಿ ನಾನಾ ರೀತಿಯ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸುವ ಮೂಲಕ ಸಪ್ತರಾತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ಸೇರಿದಂತೆ ಗಣ್ಯರು ಉಪಸ್ಥಿತರಿರಲಿದ್ದಾರೆ.

ಮೊದಲ ದಿನ ಸಂಜೆ 7ಕ್ಕೆ ಯೋಗೀಂದ್ರ ಸಭಾ ಮಂಟಪದಲ್ಲಿ ‘ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಲಿದೆ. ಅನೇಕ ಗ್ರಂಥಗಳ ಬಿಡುಗಡೆ ನಡೆಯಲಿದೆ. ಆ.13ರಂದು ಬೆಳಗ್ಗೆ 7.30ಕ್ಕೆ ತಿರುಪತಿಯ ವೆಂಕಟೇಶ ದೇವರ ಶೇಷವಸ್ತ್ರ ಕರೆತಂದು ರಾಯರಿಗೆ ಸಮರ್ಪಿಸಲಾಗುತ್ತದೆ. ಮಹಾಪಂಚಾಮೃತ ಅಭಿಷೇಕ, ಸ್ವರ್ಣ ರಥೋತ್ಸವ ನಡೆಯಲಿದೆ. ಆ.13ರಂದು ಬೆಳಗ್ಗೆ ರಾಯರಿಗೆ ವಸಂತೋತ್ಸವ, ಮಹಾರಥೋತ್ಸವ ನಡೆಯಲಿದೆ. ಮೂರು ದಿನ ಶ್ರೀಮಠದ ಪ್ರಾಕಾರ ಮತ್ತು ಯೋಂಗಿಂದ್ರ ಸಭಾ ಮಂಟಪದಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಪಾಠ ಪ್ರವಚನ ಕಾರ್ಯಕ್ರಮಗಳು ಜರುಗಲಿವೆ.

ಮಠವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ರಾಯರ ಮಠದ ಮುಂಭಾಗದ ವಿಶಾಲ ರಸ್ತೆಯ ಎರಡೂ ಬದಿ ಚಿತ್ತಾಕರ್ಷಕ ಮಂಟಪ ಮಾದರಿ ನಿರ್ಮಿಸಲಾಗಿದೆ. ಅಲ್ಲಿ ಮಹಾಭಾರತದ ವಿವಿಧ ಪ್ರಸಂಗಗಳನ್ನು ಭಕ್ತರಿಗೆ ಪರಿಚಯಿಸಲಾಗುತ್ತದೆ.

ಆರಾಧನ ಮಹೋತ್ಸವಕ್ಕೆ ಬರುವ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಸಕಲ-ಸಿದ್ಧತೆಗಳನ್ನು ಆಡಳಿತ ಮಂಡಳಿ ಮಾಡಿಕೊಂಡಿದೆ. ವಸತಿ, ಶುದ್ಧ ಕುಡಿಯುವ ನೀರು, ಆರೋಗ್ಯ ಸೇವೆ ಸೇರಿ ಎಲ್ಲ ರೀತಿಯಿಂದ ಅನುಕೂಲ ಕಲ್ಪಿಸಲಾಗುತ್ತಿದೆ.