ಮನೆ ದೇವಸ್ಥಾನ ಹೆಡತಲೆ ಶ್ರೀಲಕ್ಷ್ಮೀಕಾಂತಸ್ವಾಮಿ ದೇವಾಲಯ

ಹೆಡತಲೆ ಶ್ರೀಲಕ್ಷ್ಮೀಕಾಂತಸ್ವಾಮಿ ದೇವಾಲಯ

0

ಶ್ರೀಕಂಠನ ನೆಲೆವೀಡು ನಂಜನಗೂಡಿಗೆ ಸಮೀಪದಲ್ಲೇ ಇರುವ ಮತ್ತೊಂದು ಪುಣ್ಯಕ್ಷೇತ್ರ ಹೆಡತಲೆ. ನಂಜನಗೂಡಿನಿಂದ ಚಾಮರಾಜನಗರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಸಾಗಿದರೆ ಹತ್ತನೆ ಮೈಲಿಗಲ್ಲಿನ ಬಳಿ ತಿರುಗಿದರೆ ಎರಡು ಕಿಲೋ ಮೀಟರು ದೂರದಲ್ಲಿ ಸಿಗುವುದೇ ಹೆಡತಲೆ.

ಈ ಊರಿಗೆ ಹೆಡೆತಲೆ ಎಂಬ ಹೆಸರು ಬಂದ ಬಗ್ಗೆ ಪುರಾಣದಲ್ಲಿ ಒಂದು ಕಥೆ ಇದೆಯಂತೆ. ಹಿಂದೆ ಈ ಕ್ಷೇತ್ರ ಕೌಂಡಿನ್ಯ ಮಹರ್ಷಿಗಳ ತಪೋಭೂಮಿಯಾಗಿತ್ತು. ಹೀಗಾಗಿ ಈ ಕ್ಷೇತ್ರಕ್ಕೆ ಕೌಂಡಿನ್ಯ ಕ್ಷೇತ್ರ ಎಂದೇ ಹೆಸರು ಬಂದಿತ್ತು. ಇಲ್ಲಿ ಋಷಿ ಮುನಿಗಳು ಯಜ್ಞ ಯಾಗಾದಿಗಳನ್ನು ಮಾಡುತ್ತಿದ್ದಾಗ ರಾಕ್ಷಸರು ಬಂದು ಅಡಚಣೆ ಉಂಟು ಮಾಡುತ್ತಿದ್ದರು. ರಾಕ್ಷಸರ ಕಾಟ ಸಹಿಸಲಾರದೆ ಋಷಿಮುನಿಗಳು ಶ್ರೀಮನ್ನಾರಾಯಣನ ಮೊರೆ ಹೋದರು. ತಮ್ಮನ್ನು ಕಾಪಾಡುವಂತೆ ಬೇಡಿಕೊಂಡರು. ಪ್ರಸನ್ನನಾದ ನಾರಾಯಣ ಭೂಲೋಕಕ್ಕೆ ಬಂದು ತನ್ನ ಸುದರ್ಶನ ಚಕ್ರದಿಂದ ರಾಕ್ಷಸರನ್ನು ಸಂಹಾರ ಮಾಡಿದ. ಈ ಸಂದರ್ಭದಲ್ಲಿ ರಾಕ್ಷಸನ ತಲೆಯ ಎಡಭಾಗವು ಈ ಗ್ರಾಮದಲ್ಲಿ ಬಂದು ಬಿತ್ತಂತೆ. ಎಡ ಭಾಗದ ತಲೆ ಬಂದು ಬಿದ್ದ ಊರು ಎಡತಲೆ ಎಂದೇ ಖ್ಯಾತವಾಯಿತು. ಕಾಲಾನಂತರದಲ್ಲಿ ಅಪ್ರಭ್ರಂಶವಾಗಿ ಹೆಡತಲೆಯಾಯಿತು ಎನ್ನುತ್ತಾರೆ ಊರ ಹಿರಿಯರು.

ಅದೇ ರೀತಿ ರಾಕ್ಷಸನ ಕಾಲಿನ ಭಾಗ ಹೋಗಿ ಮತ್ತೊಂದು ಊರಿನಲ್ಲಿ ಬಿತ್ತು. ರಾಕ್ಷಸನ ಆ ಕಾಲು ದೊಡ್ಡ ಮರ (ಹೆಮ್ಮರ)ದಂತೆ ಕಾಣುತ್ತಿದ್ದ ಕಾರಣ ಆ ಊರಿನ ಹೆಮ್ಮರಗಾಲು ಎಂಬ ಹೆಸರು ಬಂತು. ಈಗ ಅದು ಹೆಮ್ಮರಗಾಲವಾಗಿದೆ.

ಈ ಊರು ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಕರಾದ ಶ್ರೀರಂಗಪ್ರಿಯ ಸ್ವಾಮಿಗಳ ಜನ್ಮಸ್ಥಳವೂ ಹೌದು. ಈ ಪುರಾಣ ಪ್ರಸಿದ್ಧ ಸ್ಥಳದಲ್ಲಿ ಹೊಯ್ಸಳರು ಶ್ರೀಲಕ್ಷ್ಮೀಕಾಂತ ಸ್ವಾಮಿ ದೇವಾಲಯವನ್ನು ನಿರ್ಮಿಸಿದ್ದಾರೆ. ಮೂರು ಗೋಪುರ, ಮೂರು ಗರ್ಭಗುಡಿಯನ್ನು ಹೊಂದಿರುವ ಈ ದೇವಾಲಯ ತ್ರಿಕೂಟಾಚಲವಾಗಿ ಪ್ರಸಿದ್ಧಿ ಪಡೆದಿದೆ.

ಕ್ರಿಸ್ತಶಕ 1282ರಲ್ಲಿ ನಿರ್ಮಿಸಿದ್ದೆಂದು ಹೇಳಲಾಗುವ ಈ ದೇವಾಲಯ ಪೂರ್ವಾಭಿಮುಖವಾಗಿದೆ. ಆದರೆ ಒಂದು ಗರ್ಭಗೃಹದಲ್ಲಿರುವ ಶ್ರೀ ಲಕ್ಷ್ಮೀಕಾಂತಸ್ವಾಮಿ ಇಲ್ಲಿ ದಕ್ಷಿಣಾಭಿಮುಖನಾಗಿದ್ದಾನೆ.  ಮತ್ತೊಂದು ಗರ್ಭಗೃಹದಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಇದ್ದು ಈ ವಿಗ್ರಹ ಉತ್ತರಾಭಿಮುಖವಾಗಿದೆ. ಮೂರನೆಯ ಗರ್ಭಗೃಹದಲ್ಲಿ ಶ್ರೀ ವೇಣುಗೋಪಾಲಸ್ವಾಮಿ ಮೂರ್ತಿ ಇದೆ.

ಈ ಮೂರು ಗರ್ಭಗೃಹ ಹಾಗೂ ಶಿಲಾಮೂರ್ತಿಗಳು ಹೊಯ್ಸಳರ ವಾಸ್ತುಶಿಲ್ಪಕ್ಕೆ ಹಿಡಿದ ಕನ್ನಡಿಯಾಗಿವೆ. ಕಲಾಶ್ರೀಮಂತಿಕೆಯಿಂದ ಕೂಡಿರುವ ವಿಗ್ರಹಗಳ ಹಿಂದಿರುವ ಪ್ರಭಾವಳಿಯಲ್ಲಿ ದಶಾವತಾರದ ಕೆತ್ತನೆ ಇದೆ. ಹಜಾರದ ಮಧ್ಯ ಭಾಗದಲ್ಲಿ ನಿಂತರೆ ಮೂರೂ ದೇವರುಗಳ ದರ್ಶನವಾಗುವ ರೀತಿಯಲ್ಲಿ ದೇವಾಲಯ ನಿರ್ಮಿಸಲಾಗಿದೆ.

ಈಶಾನ್ಯ ಮೂಲೆಯಲ್ಲಿ ಆಂಡಾಳ್ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀ ಲಕ್ಷ್ಮೀಕಾಂತಸ್ವಾಮಿಯು ಶಂಖ, ಚಕ್ರ, ಗದಾ, ಪದ್ಮಧಾರಿಯಾಗಿದ್ದು ಈ ವಿಗ್ರಹ ಮನಮೋಹಕವಾಗಿದೆ.

ಶ್ರೀಲಕ್ಷ್ಮೀನರಸಿಂಹಸ್ವಾಮಿ ತನ್ನ ಎಡತೊಡೆಯ ಮೇಲೆ ಶ್ರೀಮಹಾಲಕ್ಷ್ಮಿಯನ್ನು ಕೂರಿಸಿಕೊಂಡಿದ್ದು ನರಸಿಂಹಸ್ವಾಮಿ ಶಾಂತಸ್ವರೂಪಿಯಾಗಿದ್ದಾನೆ. ಇನ್ನು ಶ್ರೀ ವೇಣುಗೋಪಾಲ ಸ್ವಾಮಿ ಕೊಳಲು ನುಡಿಸುತ್ತಿದ್ದು ಪ್ರಭಾವಳಿಯಲ್ಲಿ  ರುಕ್ಮಿಣಿ ಸತ್ಯಭಾಮೆ ಹೂಗ ಗೋವುಗಳನ್ನು ಶಿಲ್ಪಿ ಕಡೆದಿದ್ದಾನೆ. ಅತ್ಯಂತ ಪ್ರಾಚೀನವಾದ ಈ ದೇವಾಲಯ ನೋಡಲೇ ಬೇಕಾದ ಪುಣ್ಯಕ್ಷೇತ್ರ.  

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in