ಮನೆ ರಾಜ್ಯ ಮೈಸೂರು ರಾಜಮನೆತನಕ್ಕೆ ಪರಿಹಾರ ನೀಡದ್ದಕ್ಕೆ ಸರ್ಕಾರಿ ಕಟ್ಟಡ ವಶ

ಮೈಸೂರು ರಾಜಮನೆತನಕ್ಕೆ ಪರಿಹಾರ ನೀಡದ್ದಕ್ಕೆ ಸರ್ಕಾರಿ ಕಟ್ಟಡ ವಶ

0

ಬೆಂಗಳೂರು(Bengauru): ಮೈಸೂರು ರಾಜಮನೆತನಕ್ಕೆ ಪರಿಹಾರ ನೀಡದ ಕಾರಣಕ್ಕಾಗಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಕಟ್ಟಡ ಹಾಗೂ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸರ್ಕಾರದ ವತಿಯಿಂದ ಮೈಸೂರಿನ ಚಾಮುಂಡಿ ವಿಹಾರ್ ಸ್ವತ್ತನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಶಪಡಿಸಿಕೊಂಡಿತ್ತು.

ಇದನ್ನು ಪ್ರಶ್ನಿಸಿ ರಾಜಮನೆತನದ ತ್ರಿಪುರ ಸುಂದರದೇವಿ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಈಗಾಗಲೇ ಪರಿಹಾರ ನೀಡಲು ಆದೇಶ ನೀಡಿತ್ತು. ಆದರೆ ಈವರೆಗೂ ಪರಿಹಾರ ನೀಡದ ಹಿನ್ನೆಲೆ ಕೋರ್ಟ್ ಅಮೀನ್  ಉಪಸ್ಥಿತಿಯಲ್ಲಿ ಕಟ್ಟಡ ಮತ್ತು ಪರಿಕರಗಳನ್ನು ಜಪ್ತಿ ಮಾಡಲು ನ್ಯಾಯಾಲಯ ಆದೇಶಿಸಿದೆ.

ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಒಟ್ಟು 27 ಕೋಟಿ ರೂ ಮೊತ್ತದಲ್ಲಿ ಅರ್ಧದಷ್ಟು ಹಣ ಪಾವತಿ ಮಾಡಬೇಕಿತ್ತು. ಅದನ್ನ ಪಾವತಿ ಮಾಡದ ಕಾರಣ ಕೋರ್ಟ್ ಆದೇಶದಂತೆ ಇಲಾಖೆಯ ಮೂವೆಬಲ್ ಪ್ರಾಪರ್ಟಿಗಳು ಜಪ್ತಿಯಾಗಿವೆ. ಕಂಪ್ಯೂಟರ್, ಫ್ಯಾನ್, ಟಿವಿ, ಚೇರ್ ಗಳು ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಚಾಮುಂಡಿ ವಿಹಾರ್ ವಶಕ್ಕೆ ಪಡೆದದ್ದನ್ನ ಪ್ರಶ್ನಿಸಿ ನಾಲ್ವರು ಕೋರ್ಟ್ ಮೆಟ್ಟಿಲೇರಿದ್ದರು. ಇದರಲ್ಲಿ ರಾಜಮನೆತನ ತ್ರಿಪುರ ಸುಂದರದೇವಿಯವರೂ ಒಬ್ಬರು. ಒಟ್ಟು 80 ಕೋಟಿ ರೂಪಾಯಿ ಪರಿಹಾರ ನೀಡಲು ಕೋರ್ಟ್ ಅದೇಶ ಮಾಡಿತ್ತು. ಇದರಲ್ಲಿ ತ್ರಿಪುರ ಸುಂದರ ದೇವಿಯವರಿಗೆ 27 ಕೋಟಿ ರೂ ಪರಿಹಾರ ನೀಡಬೇಕಿತ್ತು. ಆದರೆ ಕೋರ್ಟ್ ನಿಂದ ನಾಲ್ಕು ಬಾರಿ ನೊಟೀಸ್ ನೀಡಿದ್ದರೂ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಕ್ಯಾರೆ ಎಂದಿರಲಿಲ್ಲ. ಈ ಹಿನ್ನೆಲೆ ನ್ಯಾಯಾಲಯದಿಂದ ಜಪ್ತಿ ಅದೇಶ ಹೊರಬಿದ್ದಿತ್ತು.