ಮುಂಬೈ (Mumbai): ಷೇರು ಮಾರುಕಟ್ಟೆ ಲೋಕದ ದಿಗ್ಗಜ, ಭಾರತದ ‘ವಾರೆನ್ ಬಫೆಟ್’ ಎಂದೇ ಖ್ಯಾತರಾದ ಹಿರಿಯ ಉದ್ಯಮಿ ರಾಕೇಶ್ ಜುಂಜುನ್ ವಾಲಾ (62) ಇಂದು ನಿಧನರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ರಾಕೇಶ್ ಜುಂಜುನ್ ವಾಲಾ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.
ಜುಂಜುನ್ ವಾಲಾ 1960, ಜುಲೈ 5ರಂದು ಜನಿಸಿದ್ದು ಮುಂಬೈನಲ್ಲಿ ಬೆಳೆದಿದ್ದರು. 1985ರಲ್ಲಿ ಸಿಡಿನ್ಹೆಮ್ ಕಾಲೇಜಿನಲ್ಲಿ ಪದವಿ ಗಳಿಸಿ ಬಳಿಕ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ನಲ್ಲಿ ಶಿಕ್ಷಣ ಮುಗಿಸಿ ಷೇರು ಮಾರುಕಟ್ಟೆ ಹೂಡಿಕೆ ಕ್ಷೇತ್ರಕ್ಕೆ ಕಾಲಿಟ್ಟರು.
ಜುಂಜುನ್‌ವಾಲಾ ಅವರು RARE ಎಂಟರ್‌ಪ್ರೈಸಸ್ ಎಂಬ ಖಾಸಗಿ ಒಡೆತನದ ಷೇರು ವ್ಯಾಪಾರ ಸಂಸ್ಥೆಯನ್ನು ನಡೆಸುತ್ತಿದ್ದರು. ಅವರು ಈ ತಿಂಗಳ ಆರಂಭದಲ್ಲಿ ಭಾರತದ ಹೊಸ ವಿಮಾನಯಾನ ಸಂಸ್ಥೆ ಆಕಾಶ ಏರ್‌ನ ಮಾಲೀಕರೂ ಆಗಿದ್ದರು.
ವಿಮಾನಯಾನವು ಉತ್ತಮವಾಗಿ ಕಾರ್ಯನಿರ್ವಹಿಸದಿರುವಾಗ ಅವರು ವಿಮಾನಯಾನವನ್ನು ಪ್ರಾರಂಭಿಸಲು ಏಕೆ ಯೋಜಿಸಿದ್ದಾರೆ ಎಂದು ಬಹಳಷ್ಟು ಜನರು ಪ್ರಶ್ನಿಸಿದರು, ಅದಕ್ಕೆ ಅವರು ನಾನು ವೈಫಲ್ಯಕ್ಕೆ ಸಿದ್ಧನಾಗಿದ್ದೇನೆ ಎಂದು ಉತ್ತರಿಸಿದ್ದರು. ಭಾರತದ ಷೇರು ಮಾರುಕಟ್ಟೆಯ ಬಗ್ಗೆ ಉತ್ಸುಕರಾಗಿದ್ದರು. ಅವರು ಖರೀದಿಸಿದ ಬಹುತೇಕ ಷೇರುಗಳು ಉತ್ತಮ ವಹಿವಾಟು ನಡೆಸಿ ಅಪಾರ ಹಣ ಗಳಿಸುತ್ತಿದ್ದವು.
ಗಣ್ಯರ ಸಂತಾಪ:
ರಾಕೇಶ್ ಜುಂಜುನ್ ವಾಲಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ರಾಕೇಶ್ ಜುಂಝನ್‌ವಾಲಾ ಅವರು ಅದಮ್ಯ ವ್ಯಕ್ತಿ. ಅವರ ಸಂಪೂರ್ಣ ಬದುಕು ವಿನೋದ ಮತ್ತು ಗಾಂಭೀರ್ಯತೆಯಿಂದ ಕೂಡಿದ್ದಾಗಿದೆ. ಹಣಕಾಸು ಕ್ಷೇತ್ರಕ್ಕೆ (ಆರ್ಥಿಕ ವಲಯ) ಅಳಿಸಲಾಗದ ಕೊಡುಗೆಯನ್ನು ನೀಡಿದ್ದಾರೆ. ಭಾರತದ ಪ್ರಗತಿಯ ಬಗ್ಗೆ ತುಂಬಾ ಉತ್ಸುಕರಾಗಿದ್ದರು. ಅವರ ಅಗಲಿಕೆ ಬೇಸರವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ಮತ್ತು ಹಿತೈಷಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ’ ಎಂದು ಕಂಬನಿ ಮಿಡಿದಿದ್ದಾರೆ.