ಹೊಸದಿಲ್ಲಿ: ಭಾರತ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ 2-1 ಅಂತರದಲ್ಲಿ ಗೆಲ್ಲಲಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ಆಲ್‌ರೌಂಡರ್ ಒವೈಸ್ ಶಾ ಭವಿಷ್ಯ ನುಡಿದಿದ್ದಾರೆ.
ಚೊಚ್ಚಲ ಆವೃತ್ತಿಯ ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್ ಟೂರ್ನಿಯ ಭಾಗವಾಗಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಿದ್ದು ಫೆಬ್ರವರಿ 5ರಿಂದ ನಾಲ್ಕು ಪಂದ್ಯಗಳ ಮಹತ್ವದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಪೈಪೋಟಿ ನಡೆಸಲಿದೆ.
ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಬಯೋ ಸೆಕ್ಯೂರ್ ವಾತಾವರಣದ ಅಡಿಯಲ್ಲಿ ಸರಣಿ ಜರುಗಲಿದ್ದು, 3ನೇ ಮತ್ತು ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಅಹ್ಮದಾಬಾದ್‌ನ ನೂತನ ಸರ್ದಾರ್ ಪಟೇಲ್ ಕ್ರೀಡಾಂಗಣ ಆತಿಥ್ಯ ವಹಿಸಿದೆ.
ಇನ್ನು ಟೆಸ್ಟ್ ಕ್ರಿಕೆಟ್ ಸರಣಿ ಬಳಿಕ ಇತ್ತಂಡಗಳು ಇದೇ ವರ್ಷದ ಅಂತ್ಯದಲ್ಲಿ ನಡೆಯಲಿರುವ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಸಜ್ಜಾಗುವ ನಿಟ್ಟಿನಲ್ಲಿ 5 ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಸರಣಿಯಲ್ಲಿ ಕಾದಾಟ ನಡೆಸಲಿವೆ. ಬಳಿಕ ಪುಣೆಯಲ್ಲಿ 3 ಪಂದ್ಯಗಳ ಒಡಿಐ ಸರಣಿ ಜರುಗಲಿದೆ.
42 ವರ್ಷದ ಮಾಜಿ ಕ್ರಿಕೆಟಿಗ ಒವೈಸ್ ಶಾ ಇಂಗ್ಲೆಂಡ್ ತಂಡದ ಪರ 6 ಟೆಸ್ಟ್ ಮತ್ತು 71 ಒಡಿಐ ಪಂದ್ಯಗಳನ್ನು ಆಡಿದ ಅನುಭವ ಹೊಂದಿದೆ.
ಟೀಮ್ ಇಂಡಿಯಾಗೆ ಅವರ ತವರು ನೆಲದಲ್ಲಿ ಸವಾಲೊಡ್ಡಬಲ್ಲ ಬೌಲರ್‌ಗಳು ಇಂಗ್ಲೆಂಡ್ ತಂಡದಲ್ಲಿ ಇಲ್ಲ ಎಂಬುದು ನನ್ನ ಅಭಿಪ್ರಾಯ. ಹೀಗಾಗಿ ಸರಣಿಯಲ್ಲಿ ಭಾರತ ತಂಡ 2-1 ಅಂತರದ ಜಯ ದಾಖಲಿಸುವ ಸಾಧ್ಯತೆ ಹೆಚ್ಚಿದೆ ಎಂದು ಸ್ಪೋರ್ಟ್ಸ್ ಟುಡೇ ಕಾರ್ಯಕ್ರಮದಲ್ಲಿ ಒವೈಸ್ ಹೇಳಿದ್ದಾರೆ.
ಅಂದಹಾಗೆ ಎರಡೂ ತಂಡಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಆತ್ಮವಿಶ್ವಾಸದ ಅಲೆಯಲ್ಲಿವೆ. ಭಾರತ ತಂಡ ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿ ಆಡಿ 2-1 ಅಂತರದ ಐತಿಹಾಸಿಕ ಜಯದೊಂದಿಗೆ ತಾಯ್ನಾಡಿದೆ ಹಿಂದಿರುಗಿದೆ. ಮತ್ತೊಂದೆಡೆ ಶ್ರೀಲಂಕಾ ಪ್ರವಾಸ ಮುಗಿಸಿ ಬಂದಿರುವ ಜೋ ರೂಟ್ ಸಾರಥ್ಯದ ಇಂಗ್ಲೆಂಡ್ 2-0 ಅಂತರದ ವೈಟ್‌ವಾಶ್ ಗೆಲುವಿನೊಂದಿಗೆ ಉಪಖಂಡಗಳ ಪಿಚ್‌ಗೆ ಹೊಂದಿಕೊಂಡಿರುವ ಆತ್ಮವಿಶ್ವಾಸದಲ್ಲಿ ಭಾರತಕ್ಕೆ ಕಾಲಿಟ್ಟಿದೆ.
ಶ್ರೀಲಂಕಾ ವಿರುದ್ಧದ ಸರಣಿ ಗೆಲುವಿನಿಂದ ಇಂಗ್ಲೆಂಡ್ ತಂಡದ ಆತ್ಮವಿಶ್ವಾಸ ಹೆಚ್ಚಾಗಿರುವುದು ಖಂಡಿತಾ. 2-0 ಅಂತರದ ಸರಣಿ ಗೆಲುವ ನಿಜಕ್ಕೂ ಮೆಚ್ಚುವಂತಹ ಸಾಧನೆ. ಏಕೆಂದರೆ ಅಲ್ಲಿ ನೀಡಲಾಗಿದ್ದ ಪಿಚ್‌ಗಳು ಮೊದಲ ದಿನವೇ ಸ್ಪಿನ್ನರ್‌ಗಳಿಗೆ ತಿರುವು ನೀಡುತಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಸಹಜವಲ್ಲ. ಇಷ್ಟು ಸವಾಲಿನ ಸ್ಥಿತಿಯಲ್ಲೂ ಇಂಗ್ಲೆಂಡ್ ಗೆದ್ದು ಬಂದಿರುವುದು ಗಮನಾರ್ಹ ಎಂದು ಶಾ ವಿವರಿಸಿದ್ದಾರೆ.