ಮೈಸೂರು(Mysuru): ಸೈಬರ್ ಅಪರಾಧ ಪ್ರಕರಣಕ್ಕೆ ಸಂಬಂಧಿಸದಂತೆ ಓರ್ವನನ್ನು ಬಂಧಿಸಿರುವ ಸೆನ್ ಪೊಲೀಸ್ ಠಾಣೆ ಅಧಿಕಾರಿಗಳು, 15.05 ಲಕ್ಷ ರೂ. ನಗದು ಸೇರಿದಂತೆ ಒಟ್ಟು 17,41,000 ರೂ. ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.
2020ರ ನವೆಂಬರ್ 1 ರಿಂದ ಡಿಸೆಂಬರ್ 24ರವರೆಗೆ ಯುವಕನೋರ್ವ (ಆ ವೇಳೆ ಅಪ್ರಾಪ್ತನಾಗಿದ್ದ) ವ್ಯಕ್ತಿಯೊಬ್ಬರ ಹೆಚ್ ಡಿಎಫ್ ಸಿ ಬ್ಯಾಂಕ್ ಖಾತೆಯ ಡೆಬಿಟ್ ಕಾರ್ಡ್ ನಂಬರ್ ನಲ್ಲಿ 21,02,041 ರೂ. ಹಣವನ್ನು ಖಾತೆದಾರರ ಗಮನಕ್ಕೆ ಬಾರದೆ ವರ್ಗಾವಣೆ ಮಾಡಿರುವ ಬಗ್ಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖೆ ಕೈಗೊಂಡಿದ್ದ ಪೊಲೀಸರು, ತಂತ್ರಜ್ಞಾನದ ನೆರವಿನಿಂದ ಆರೋಪಿಯು ವಸ್ತುಗಳನ್ನು ಖರೀದಿಸಿದ್ದ ಕಂಪನಿಯಿಂದ ಮಾಹಿತಿ ಪಡೆದು 2022ರ ಆಗಸ್ಟ್ 14 ರಂದು ಆರೋಪಿಯನ್ನು ಬಂಧಿಸಿದ್ದಾರೆ. ಆತ ದೂರುದಾರರಿಗೆ ಪರಿಚಯಸ್ಥನಾಗಿದ್ದು, ಅವರ ಡೆಬಿಟ್ ಕಾರ್ಡ್ ಮತ್ತು ಸಿವಿವಿ ನಂಬರ್ ತಿಳಿದುಕೊಂಡು ಅಮೆಜಾನ್ ನಲ್ಲಿ 20 ಲಕ್ಷ ರೂ. ಬೆಲೆಬಾಳುವ ಚಿನ್ನದ ನಾಣ್ಯಗಳು ಮತ್ತು ಇತರ ವಸ್ತುಗಳನ್ನು ಖರೀದಿಸಿದ್ದ ಎಂಬುದು ವಿಚಾರಣೆ ವೇಳೆ ತಿಳಿಯಿತು.
ಚಿನ್ನವನ್ನು ಮಾರಾಟ ಮಾಡಿದ 15,05,000 ರೂ. ನಗದು, 2,16,000 ರೂ. ಬೆಲೆಬಾಳುವ 2 ಕ್ಯಾಮರಾ, ಟಿವಿ, ಕ್ಯಾಮರಾ ಲೆನ್ಸ್, ಟ್ರೆಡ್ ಮಿಲ್, ಸ್ಪೀಕರ್, ಯುಪಿಎಸ್ ಗಳು ಹಾಗೂ 4 ಗ್ರಾಂ ಚಿನ್ನದ ಸರ ಸೇರಿ ಒಟ್ಟು 17,41,000 ರೂ. ಬೆಲೆಬಾಳುವ ವಸ್ತುಗಳನ್ನು ಪೊಲೀಸರು ಬಂಧಿತ ಆರೋಪಿಯಿಂದ ವಶಪಡಿಸಿಕೊಂಡಿದ್ದಾರೆ.
ಡಿಸಿಪಿ ಪ್ರದೀಪ್ ಗುಂಟಿ ನಿರ್ದೇಶನದಂತೆ ದೇವರಾಜ ಉಪ ವಿಭಾಗದ ಎಸಿಪಿ ಎಂ.ಎನ್.ಶಶಿಧರ್ ಮಾರ್ಗದರ್ಶನದಂತೆ ಸೈಬರ್ ಕ್ರೈಂ ಠಾಣೆ ಇನ್ಸ್ ಪೆಕ್ಟರ್ ಎನ್.ಜಯ ಕುಮಾರ್, ಸಬ್ ಇನ್ಸ್ ಪೆಕ್ಟರ್ ಗಳಾದ ಎನ್, ಅನಿಲ್ ಕುಮಾರ್, ಎಂ.ಎಲ್.ಸಿದ್ದೇಶ, ಎಎಸ್ ಐಗಳಾದ ಸುಭಾಷ್ ಚಂದ್ರ, ನಾಗೇಂದ್ರ, ಭಾಷಾ ಹಾಗೂ ಸಿಬ್ಬಂದಿ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಪತ್ತೆ ಕಾರ್ಯವನ್ನು ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಪ್ರಶಂಸಿಸಿದ್ದಾರೆ.