ಮನೆ ಕಾನೂನು ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋದ ತೀಸ್ತಾ ಸೆಟಲ್ವಾಡ್; ಆ. 22ರಂದು ಅರ್ಜಿಯ ವಿಚಾರಣೆ

ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋದ ತೀಸ್ತಾ ಸೆಟಲ್ವಾಡ್; ಆ. 22ರಂದು ಅರ್ಜಿಯ ವಿಚಾರಣೆ

0

ಗುಜರಾತ್ ಗಲಭೆ ಪ್ರಕರಣಗಳಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಉನ್ನತ ಅಧಿಕಾರಿಗಳನ್ನು ಬಂಧಿಸಲೆಂದು ದಾಖಲೆ ತಿರುಚಿದ ಆರೋಪದ ಮೇಲೆ ಬಂಧಿತರಾಗಿರುವ ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರು ಜಾಮೀನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

[ತೀಸ್ತಾ ಅತುಲ್ಸೆಟಲ್ವಾಡ್ಮತ್ತಿತರರು ಹಾಗೂ ಗುಜರಾತ್ಸರ್ಕಾರ ನಡುಔಣ ಪ್ರಕರಣ].

ಸೆಟಲ್ವಾಡ್ ಮತ್ತು ಗುಜರಾತ್ ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಆರ್‌ ಬಿ ಶ್ರೀಕುಮಾರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗಳಿಗೆ ಪ್ರತಿಕ್ರಿಯೆ ನೀಡುವಂತೆ ಗುಜರಾತ್ ಹೈಕೋರ್ಟ್ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಆಗಸ್ಟ್ 2ರಂದು ನೋಟಿಸ್ ನೀಡಿತ್ತು. ಪ್ರಕರಣದ ವಿಚಾರಣೆಯನ್ನು ನಡೆಸಲು ಹೈಕೋರ್ಟ್ ಸೆಪ್ಟೆಂಬರ್ 19ಕ್ಕೆ ಪಟ್ಟಿ ಮಾಡಿತ್ತು.

ಜಾಮೀನು ಅರ್ಜಿಯ ಮುಂದಿನ ವಿಚಾರಣೆಯನ್ನು ಇಷ್ಟು ದೀರ್ಘಾವಧಿಯ ನಂತರ ನಿಗದಿಪಡಿಸಿದ ಹೈಕೋರ್ಟ್‌ ಕ್ರಮವನ್ನು ಆಕ್ಷೇಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸೆಟಲ್ವಾಡ್‌ ಮೇಲ್ಮನವಿ ಸಲ್ಲಿಸಿದ್ದಾರೆ. ಸತೇಂದರ್ ಕುಮಾರ್ ಅಂತಿಲ್ ಮತ್ತು ಸಿಬಿಐ ನಡುವಣ ಪ್ರಕರಣದಲ್ಲಿ ಜಾಮೀನು ಪ್ರಕರಣಗಳನ್ನು ತ್ವರಿತವಾಗಿ ಆಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ತೀರ್ಪು ನೀಡಿದೆ. ಆದರೂ ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಜಮೀನು ಅರ್ಜಿಯ ಮೊದಲ ವಿಚಾರಣೆಯನ್ನು ಒಂದೂವರೆ ತಿಂಗಳ ದೀರ್ಘವಧಿ ನಂತರ ನಿಗದಿಪಡಿಸಿದೆ ಎಂದು ದೂರಲಾಗಿದೆ.

ಮಂಗಳವಾರ ಬೆಳಿಗ್ಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ,ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠದ ಮುಂದೆ ಮೇಲ್ಮನವಿ ಉಲ್ಲೇಖಿಸಲಾಗಿದ್ದು, ಪ್ರಕರಣವನ್ನು ಆಗಸ್ಟ್ 22ಕ್ಕೆ ನ್ಯಾಯಮೂರ್ತಿ ಯು ಯು ಲಲಿತ್ ನೇತೃತ್ವದ ಪೀಠದ ಮುಂದೆ ಪಟ್ಟಿ ಮಾಡುವಂತೆ ಅದು ಸೂಚಿಸಿತು.