ಮನೆ ವ್ಯಾಯಾಮ 50 ವರ್ಷ ದಾಟಿದ ಬಳಿಕ ಮಾಡಬಹುದಾದ ವ್ಯಾಯಾಮ

50 ವರ್ಷ ದಾಟಿದ ಬಳಿಕ ಮಾಡಬಹುದಾದ ವ್ಯಾಯಾಮ

0

ವಯಸ್ಸಾದ ಮೇಲೆ ಆರೋಗ್ಯದೆಡೆಗೆ ಗಮನ ನೀಡುವುದು ಮೊದಲ ಕೆಲಸವಾಗಬೇಕು. ವಯಸ್ಸಾದ ಮೇಲೆ ಕಾಯಿಲೆಗಳ ಅಪಾಯ ಹೆಚ್ಚು, ಹೀಗಾಗಿ ಕೆಲವೊಂದು ವ್ಯಾಯಾಮಗಳು ದೇಹವನ್ನು ಫಿಟ್‌ ಆಗಿಟ್ಟು ಅನಾರೋಗ್ಯದಿಂದ ಸುರಕ್ಷಿತವಾಗಿಸುತ್ತದೆ. 50 ವರ್ಷ ದಾಟಿದವರಿಗೆ ದಿನನಿತ್ಯ 5 ನಿಮಿಷ ಈ ವ್ಯಾಯಾಮಗಳನ್ನು ಮಾಡಬಹುದಾಗಿದೆ. 50 ವರ್ಷ ದಾಟಿದ ಬಳಿಕ ಮಾಡಬಹುದಾದ ವ್ಯಾಯಾಮಗಳ ಮಾಹಿತಿ ಇಲ್ಲಿದೆ.

​ಮಂಡಿಗಳ ವ್ಯಾಯಾಮ

ಸಾಮಾನ್ಯವಾಗಿ ವಯಸ್ಸಾದಂತೆ ಸಂಧಿವಾತ, ಮಂಡಿ ನೋವು ಹೆಚ್ಚು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಮಂಡಿಗಳಿಗೆ ವ್ಯಾಯಾಮ ನೀಡುವುದು ಹೆಚ್ಚು ಅಗತ್ಯವಾಗಿರುತ್ತದೆ. ಅದಕ್ಕಾಗಿ ಹ್ಯಾಮ್‌ಸ್ಟ್ರಿಂಗ್‌ ಸ್ಟ್ರೆಚ್‌ ವ್ಯಾಯಾಮ ಮಾಡಬಹುದು. ನಿಮ್ಮ ಪಾದಗಳನ್ನು ಅಗಲ ಮಾಡಿ ನಿಂತುಕೊಂಡು ನಿಮ್ಮ ಕೈಗಳನ್ನು ಪಕ್ಕದಲ್ಲಿ ಇರಿಸಿ ನಿಂತುಕೊಳ್ಳಿ. ಉಸಿರನ್ನು ಬಿಡುತ್ತಾ ಮುಂದಕ್ಕೆ ಬಾಗಿ ನಿಮ್ಮ ತಲೆಯನ್ನು ತಗ್ಗಿಸಿ. ನಿಮ್ಮ ತಲೆ, ಕುತ್ತಿಗೆ ಮತ್ತು ಭುಜಗಳನ್ನು ಆರಾಮವಾಗಿರುವಂತೆ ನೋಡಿಕೊಳ್ಳಿ. ನಿಮ್ಮ ಕಾಲುಗಳ ಹಿಂಭಾಗವನ್ನು ನಿಮ್ಮ ಎರಡೂ ಕೈಗಳಿಂದ ಸುಮಾರು 45 ಸೆಕೆಂಡುಗಳಿಂದ ಎರಡು ನಿಮಿಷಗಳ ಕಾಲ ಹಿಡಿದುಕೊಳ್ಳಿ ಮತ್ತು ಸಾಮಾನ್ಯ ಸ್ಥಿತಿಗೆ ಹಿಂತಿರುಗಿ.

​ಮೊಣಕೈ ವ್ಯಾಯಮ

ವಾತ ದೋಷದಿಂದ ಅಥವಾ ಇನ್ನಿತರ ಸಮಸ್ಯೆಗಳಿಂದ ತೋಳು ಮೊತ್ತು ಮೊಣಕೈ ಗಂಟುಗಳಲ್ಲಿ ಕೆಲವರಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಈ ವ್ಯಾಯಾಮ ಅತ್ಯುತ್ತಮ ಮತ್ತು ಸರಳವಾಗಿದೆ. ನಿಮ್ಮ ಪಾದಗಳನ್ನು ಕೊಂಚ ಅಗಲವಾಗಿರಿಸಿ ನಿಂತುಕೊಳ್ಳಿ. ನಿಮ್ಮ ತಲೆಯ ಮೇಲೆ ತೋಳುಗಳನ್ನು ವಿಸ್ತರಿಸಿ ಆರಾಮವಾಗಿ ನೆಲದ ಮೇಲೆ ಮಂಡಿಯೂರಿ. ನಿಮ್ಮ ಎಡ ಮೊಣಕೈಯನ್ನು ಬಗ್ಗಿಸಿ ಮತ್ತು ನಿಮ್ಮ ಬೆನ್ನಿನ ಮಧ್ಯದಲ್ಲಿ ಸ್ಪರ್ಶಿಸಲು ಪ್ರಯತ್ನಿಸಿ. ನಿಮ್ಮ ಎಡಗೈಯಿಂದ ನಿಮ್ಮ ಬಲಗೈಯ ಮೊಣಕೈಯನ್ನು ಹಿಡಿದು ನಿಧಾನವಾಗಿ ನಿಮ್ಮ ತಲೆಯ ಕಡೆಗೆ ಎಳೆದುಕೊಳ್ಳಿ.

​ಭುಜಗಳಿಗೆ ವ್ಯಾಯಾಮ

ತಂಪಿನ ವಾತಾವರಣದಲ್ಲಿ ಭುಜ, ಬೆನ್ನಿನ ನೋವು ಸಾಮಾನ್ಯವಾಗಿ ಕಾಡುತ್ತವೆ. ಅದಕ್ಕಾಗಿ ಚಿತ್ರದಲ್ಲಿ ತೋರಿಸಿರುವ ರೀತಿಯಲ್ಲಿ ಭುಜಗಳಿಗೆ ವ್ಯಾಯಾಮ ನೀಡಿ. ಇದು ಮರಗಟ್ಟಿದಂತಹ ಭುಜಗಳಿಗೂ ಆರಾಮ ನೀಡುತ್ತದೆ. ನಿಮ್ಮ ಮೊಣಕಾಲುಗಳನ್ನು ಬಾಗಿಸಿ ಮತ್ತು ಒಟ್ಟಿಗೆ ಇರಿಸಿ ಆರಾಮವಾಗಿ ನೆಲದ ಮೇಲೆ ಕುಳಿತುಕೊಳ್ಳಿ. ನಿಮ್ಮ ಸೊಂಟದ ಬಳಿ ನಿಮ್ಮ ಕೈಗಳನ್ನು ಹಿಡಿದುಕೊಳ್ಳಿ ಮತ್ತು ನಿಮ್ಮ ತೋಳುಗಳನ್ನು ನೇರಗೊಳಿಸಿ ಮತ್ತು ವಿಸ್ತರಿಸಿ. ನಿಮ್ಮ ಭುಜಗಳನ್ನು ಒಟ್ಟಿಗೆ ಒತ್ತುವ ರೀತಿಯಲ್ಲಿ ಕೈಗಳನ್ನು ಬಿಗಿಯಾಗಿ ಹಿಡಿದುಕೊಳ್ಳಿ. ನಿಮ್ಮ ತಲೆಯನ್ನು ಮುಂದಕ್ಕೆ ಬಾಗಿಸಿ. ಇದನ್ನು 30 ಸೆಕೆಂಡುಗಳ ಕಾಲ ಮಾಡಿ ನಂತರ ಆರಾಮದಾಯಕ ಸ್ಥಿತಿಗೆ ಬನ್ನಿ.

​ಸೈಡ್‌ ಸ್ಟ್ರೆಚ್‌

ನಿಮ್ಮ ಕಾಲುಗಳನ್ನು ಒಟ್ಟಿಗೆ ಮಡಚಿ ನೆಲದ ಮೇಲೆ ಆರಾಮವಾಗಿ ಕುಳಿತುಕೊಳ್ಳಿ. ಪದ್ಮಾಸನದಲ್ಲಿ ಕುಳಿತುಕೊಂಡರೂ ತೊಂದರೆಯಿಲ್ಲ. ನಿಮ್ಮ ಎಡಗೈಯನ್ನು ನಿಮ್ಮ ತೊಡೆಯ ಮೇಲೆ ಇರಿಸಿ ನಿಮ್ಮ ಬಲಗೈಯನ್ನು ಮೇಲಕ್ಕೆ ವಿಸ್ತರಿಸಿ. ನಿಮ್ಮ ತಲೆ ಮತ್ತು ನಿಮ್ಮ ಬಲಗೈಯನ್ನು ನಿಧಾನವಾಗಿ ಎಡಭಾಗಕ್ಕೆ ಬಗ್ಗಿಸಿ. ಈ ಸ್ಟ್ರೆಚ್ ಅನ್ನು 30 ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ. ನಂತರ ಇನ್ನೊಂದು ಬದಿಯಲ್ಲಿ ಅದೇ ರೀತಿ ಪುನರಾವರ್ತಿಸಿ. ಇದರಿಂದ ಸೊಂಟ, ಬೆನ್ನು, ಭುಜ ಹಾಗೂ ಕುತ್ತಿಗೆಗೂ ಉತ್ತಮ ವ್ಯಾಯಾಮ ದೊರಕುತ್ತದೆ. ಅಲ್ಲದೆ ವಯಸ್ಸಾದ ಮೇಲೆ ಸುಲಭವಾಗಿ ಮತ್ತು ಪರಿಣಾಮಕಾರಿ ವ್ಯಾಯಾಮದ ಅಗತ್ಯವಿರುವುದರಿಂದ ಈ ರೀತಿ ವ್ಯಾಯಾಮಗಳು ಹೆಚ್ಚು ಒಳ್ಳೆಯದು.  

​ಬಟರ್‌ಫ್ಲೈ ಸ್ಟ್ರೆಚಿಂಗ್‌

ಯೋಗಾಸನದಲ್ಲಿನ ಬದ್ಧಕೋನಾಸನದ ಭಂಗಿಯನ್ನು ಹೋಲುವ ಈ ವ್ಯಾಯಾಮವು ತೊಡೆಗಳ ಭಾಗ ಮತ್ತು ಮಹಿಳೆಯರಿಗೆ ಗರ್ಭಾಶಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಕುಳಿತು ಮಾಡುವ ಸುಲಭ ಆಸನ ಅಥವಾ ವ್ಯಾಯಾಮ ಇದಾಗಿದೆ.

ಮಾಡುವ ವಿಧಾನ

ಮೊದಲು ಎರಡೂ ಕಾಲುಗಳನ್ನು ಮುಂದಕ್ಕೆ ಚಾಚಿ ನಂತರ ಅರ್ಧಕ್ಕೆ ಮಡಚಿ. ಎರಡು ಮೊಣಕಾಲುಗಳ ನಡುವೆ ಪಾದಗಳನ್ನು ಇರಿಸಿ. ಹಿಮ್ಮಡಿಗಳು ಸೊಂಟದ ಹತ್ತಿರ ಬರುವಂತೆ ನೋಡಿಕೊಳ್ಳಿ, ಕಾಲ್ಬೆರಳುಗಳಿಂದ ದೃಢವಾಗಿ ಹಿಡಿದುಕೊಳ್ಳಿ. ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ವಿಶ್ರಾಂತಿ ಪಡೆಯಿರಿ. ನಂತರ ನಿಧಾನವಾಗಿ ಉಸಿರನ್ನು ಬಿಡಿ. ನಂತರ ನಿಧಾನವಾಗಿ ಕೆಳಗೆ ಬಾಗಿ ಮತ್ತು ನಿಮ್ಮ ಸೊಂಟದಿಂದ ನೆಲವನ್ನು ಸ್ಪರ್ಶಿಸಿ. ಕೆಲವು ಸೆಕೆಂಡುಗಳ ಕಾಲ ಈ ಸ್ಥಾನದಲ್ಲಿರಿ. ನಂತರ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಹಿಂತಿರುಗಿ. ಇದು ಮುಟ್ಟಿನ ಸಮಯದಲ್ಲಿ ನೋವು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

​ಪಿರಿಫಾರ್ಮಿಸ್ ಸ್ಟ್ರೆಚ್

ನಿಮ್ಮ ಕಾಲುಗಳನ್ನು ನಿಮ್ಮ ಮುಂದೆ ಚಾಚಿ ನೆಲದ ಮೇಲೆ ಆರಾಮವಾಗಿ ಕುಳಿತುಕೊಳ್ಳಿ. ಈಗ ನಿಮ್ಮ ಎಡಗಾಲನ್ನು ಬಗ್ಗಿಸಿ ಮತ್ತು ಅದನ್ನು ನಿಮ್ಮ ಬಲ ಕಾಲಿನ ಮೇಲೆ ದಾಟಿಸಿ ಮತ್ತು ಪಾದವನ್ನು ನೆಲದ ಮೇಲೆ ಇರಿಸಿ. ನಿಮ್ಮ ಎಡಗೈಯನ್ನು ನಿಮ್ಮ ದೇಹದ ಹಿಂದೆ ನೆಲದ ಮೇಲೆ ಮತ್ತು ಬಲಗೈಯನ್ನು ನಿಮ್ಮ ಎಡ ಕಾಲಿನ ಮೊಣಕಾಲುಗಳ ಮೇಲೆ ಇರಿಸಿ.

ನಿಮ್ಮ ಬೆನ್ನಿನ ಕಡೆಗೆ ತಿರುಗಲು ನಿಮ್ಮ ತಲೆಯನ್ನು ಚಿತ್ರದಲ್ಲಿ ತೋರಿಸಿರುವಂತೆ ನಿಧಾನವಾಗಿ ಎಡಭಾಗಕ್ಕೆ ತಿರುಗಿಸಿ. ನಿಮ್ಮ ದೇಹವನ್ನು ನಿಮಗೆ ಸಾಧ್ಯವಾದಷ್ಟು ಹಿಂದಕ್ಕೆ ಹಿಗ್ಗಿಸಿ. 30 ಸೆಕೆಂಡ್‌ಗಳ ಕಾಲ ಇದೇ ಭಂಗಿಯಲ್ಲಿರಿ. ಈ ವ್ಯಾಯಾಮವು ನಿಮ್ಮ ಬೆನ್ನು, ಕಾಲುಗಳಿಗೆ ಆರಾಮದಾಯಕ ಅನುಭವ ನೀಡುತ್ತದೆ.