ಕಾಬೂಲ್(Kabul): ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನ ಮಸೀದಿಯೊಂದರಲ್ಲಿ ಬುಧವಾರ ಸಂಜೆ ಪ್ರಾರ್ಥನೆಯ ವೇಳೆ ಬಾಂಬ್ ದಾಳಿ ನಡೆದಿದ್ದು, ಕನಿಷ್ಠ 20 ಮಂದಿ ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಘಟನೆಯಲ್ಲಿ ಮುಸ್ಲಿಂ ಧರ್ಮಗುರು ಮುಲ್ಲಾ ಅಮೀರ್ ಮೊಹಮ್ಮದ್ ಕಾಬೂಲಿ ಮೃತಪಟ್ಟಿದ್ದಾರೆ. ಉತ್ತರ ಕಾಬೂಲ್‌ನ ಖೈರ್ ಖಾನಾ ಪ್ರದೇಶದಲ್ಲಿರುವ ಮಸೀದಿಯಲ್ಲಿ ಸಂಭವಿಸಿದ ಸ್ಫೋಟದ ತೀವ್ರತೆಗೆ ಹತ್ತಿರದ ಕಟ್ಟಡಗಳು ಹಾನಿಯಾಗಿವೆ.
ಅಫ್ಗಾನಿಸ್ತಾನದಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸಿದ್ದೇವೆ ಎಂದು ತಾಲಿಬಾನ್ ಹೇಳಿಕೊಳ್ಳುತ್ತಿದೆ. ಇನ್ನೊಂದೆಡೆ ನಾಗರಿಕರನ್ನು ಗುರಿಯಾಗಿಸಿ ಇಸ್ಲಾಮಿಕ್ ಸ್ಟೇಟ್ ನಿರಂತರ ದಾಳಿ ನಡೆಸುತ್ತಲೇ ಇದೆ ಎಂದು ವರದಿಯಾಗಿದೆ.
ಯಾವುದೇ ಉಗ್ರ ಸಂಘಟನೆ ಈ ಬಾಂಬ್ ದಾಳಿ ಹಿಂದಿನ ಹೊಣೆ ವಹಿಸಿಕೊಂಡಿಲ್ಲ. ಇದೊಂದು ಆತ್ಮಾಹುತಿ ದಾಳಿಯಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.