ಮನೆ ರಾಜಕೀಯ ಬಿಎಸ್’ವೈ  ಪಕ್ಷಕ್ಕೆ ದೊಡ್ಡಮಟ್ಟದ ಶಕ್ತಿ: ಅರುಣ್ ಸಿಂಗ್

ಬಿಎಸ್’ವೈ  ಪಕ್ಷಕ್ಕೆ ದೊಡ್ಡಮಟ್ಟದ ಶಕ್ತಿ: ಅರುಣ್ ಸಿಂಗ್

0

ಬೆಂಗಳೂರು(Bengaluru): ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಉನ್ನತ ಮಟ್ಟದ ಸಮಿತಿಯ ಸದಸ್ಯರಾಗಿರುವುದರಿಂದ ಪಕ್ಷಕ್ಕೆ ದೊಡ್ಡ ಮಟ್ಟದ ಶಕ್ತಿ ಮತ್ತು ಲಾಭ ಬಂದಿದೆ  ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

ಅಧಿಕೃತ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಗರಕ್ಕೆ ಆಗಮಿಸಿರುವ ಅರುಣ್ ಸಿಂಗ್ ಯಡಿಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ್ದರು. ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿ ಸದಸ್ಯರಾಗಿ ನೇಮಕಗೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಬಿಎಸ್​ವೈ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಸಿಂಗ್, ಯಡಿಯೂರಪ್ಪ 4 ಬಾರಿ ಮುಖ್ಯಮಂತ್ರಿಯಾದವರು. 3 ಬಾರಿ ವಿಪಕ್ಷ ನಾಯಕರಾಗಿದ್ದವರು. ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಅವಶ್ಯಕತೆ ನಿರ್ವಿವಾದ, ಅವರು ಕೇವಲ ರಾಜ್ಯಕ್ಕೆ ಮಾತ್ರವಲ್ಲ, ರಾಷ್ಟ್ರಕ್ಕೆ ನಾಯಕ, ಅವರಿಂದಾಗಿ ಪಕ್ಷಕ್ಕೆ ಖಂಡಿತ ಲಾಭವಾಗಲಿದೆ ಎಂದರು.

ಯಡಿಯೂರಪ್ಪ ಅವರಿಂದ ಕರ್ನಾಟಕವಲ್ಲದೇ ಇಡೀ ದಕ್ಷಿಣ ಭಾರತಕ್ಕೆ ಲಾಭ ಸಿಗಲಿದೆ. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ನಾವು ಸಾಗುತ್ತೇವೆ. ಅವಕಾಶ ಕಲ್ಪಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೂ ಕೂಡ ಧನ್ಯವಾದ ತಿಳಿಸುತ್ತೇನೆ ಎಂದರು.

2023ರ ಚುನಾವಣೆಗೆ ಬಿಎಸ್‌ವೈ ಅವಶ್ಯಕತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅರುಣ್ ಸಿಂಗ್, ಅದು ಗೊತ್ತಿರುವ ವಿಷಯ ಯಡಿಯೂರಪ್ಪ ಯಾವಾಗಲೂ ಕಾರ್ಯಕರ್ತರಿಗೆ ಬೆಂಬಲ ಕೊಡ್ತಾರೆ. ಯಡಿಯೂರಪ್ಪ ಸಾಕಷ್ಟು ನಿರ್ಣಾಯಕರಾಗಿದ್ದಾರೆ. ಅವರಿಂದ ಸಾಕಷ್ಟು ಮಾರ್ಗದರ್ಶನ ಪಡೆಯುತ್ತೇವೆ ಎಂದರು.

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಿಂದ ಪಕ್ಷಕ್ಕೆ ಡ್ಯಾಮೇಜ್ ಎಂಬ ವಿಚಾರದ ವಿಷಯದ ಬಗ್ಗೆ ಇಲ್ಲಿ ಮಾತನಾಡಲ್ಲ. ಆ ಪ್ರಕರಣದ ವಿಚಾರವಾಗಿ ಸರ್ಕಾರ ಎಲ್ಲ ಕ್ರಮ ತೆಗೆದುಕೊಂಡಿದೆ. ಆರೋಪಿಗಳನ್ನು ಬಂಧಿಸಿ ಜೈಲನಲ್ಲಿಟ್ಟಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.