ಮನೆ ಆರೋಗ್ಯ ಕೆಂಪು ಬಾಳೆಹಣ್ಣಿನಲ್ಲಿದೆ ಆರೋಗ್ಯ ಲಾಭಗಳು

ಕೆಂಪು ಬಾಳೆಹಣ್ಣಿನಲ್ಲಿದೆ ಆರೋಗ್ಯ ಲಾಭಗಳು

0

ಕೆಂಪು ಬಾಳೆಹಣ್ಣು ಸಾಕಷ್ಟು ಜನರಿಗೆ ಗೊತ್ತಿಲ್ಲ. ಆದರೆ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಕೆಂಪು ಬಾಳೆಹಣ್ಣು ಸೇವಿಸುವುದರಿಂದ ಏನೆಲ್ಲಾ ಉಪಯೋಗಗಳಿವೆ ಎಂಬುದರ ಮಾಹಿತಿ ಇಲ್ಲಿದೆ.

ದೇಹದಲ್ಲಿ ರಕ್ತ ಶುದ್ಧವಾಗುತ್ತದೆ

ರಕ್ತ ಶುದ್ಧೀಕರಣಕ್ಕೆ ಅನುಕೂಲವಾಗುವಂತೆ ಇರುವಂತಹ ಕೆಲವು ಬಗೆಯ ಆಂಟಿಆಕ್ಸಿಡೆಂಟ್ ಅಂಶಗಳು ಮತ್ತು ವಿಟಮಿನ್ ಅಂಶಗಳು ಕೆಂಪು ಬಾಳೆ ಹಣ್ಣಿನಲ್ಲಿ ಕಂಡುಬರುತ್ತದೆ. ರಕ್ತ ಶುದ್ಧೀಕರಣಕ್ಕೆ ನೆರವಾಗುವುದು ಮಾತ್ರವಲ್ಲದೆ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಕೂಡ ಹೆಚ್ಚಾಗುತ್ತದೆ.

ದೇಹದ ತೂಕ ಕಡಿಮೆಯಾಗುತ್ತದೆ

ಕೆಂಪು ಬಾಳೆಹಣ್ಣು ನಾರಿನ ಅಂಶ ನೀಡುವಂತಹ ಹಣ್ಣಾಗಿದೆ. ಇದು ನಿಮ್ಮ ಹೊಟ್ಟೆ ತುಂಬುವಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ನಿಮಗೆ ಒಂದು ಬಾಳೆಹಣ್ಣು ತಿಂದರೆ 90 ರಿಂದ 100 ಕ್ಯಾಲೋರಿಗಳು ಸಿಗುತ್ತವೆ ಜೊತೆಗೆ ನಾರಿನ ಅಂಶ ಕೂಡ ಇರುವುದರಿಂದ ನಿಮ್ಮ ಹೊಟ್ಟೆ ಹಸಿವು ಕಡಿಮೆಯಾಗುತ್ತದೆ ಮತ್ತು ಬೇರೆ ಆಹಾರ ಪದಾರ್ಥಗಳನ್ನು ತಿನ್ನಬೇಕು ಎನ್ನುವ ನಿಮ್ಮ ಬಯಕೆ ಇಲ್ಲವಾಗುತ್ತದೆ. ಇದರಿಂದ ಸುಲಭವಾಗಿ ನೀವು ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ದೇಹದಲ್ಲಿ ಶಕ್ತಿ ಹೆಚ್ಚುತ್ತದೆ

ಪ್ರಮುಖವಾಗಿ ಇದಕ್ಕೆ ಕಾರಣ ಎಂದರೆ ಕೆಂಪು ಬಾಳೆಹಣ್ಣಿನಲ್ಲಿ ಕಂಡುಬರುವಂತಹ ಮೂರು ಬಗೆಯ ಸಿಹಿ ಅಂಶಗಳು. ಉದಾಹರಣೆಗೆ ಗ್ಲುಕೋಸ್, ಸುಕ್ರೋಸ್, ಫ್ರಕ್ಟೋಸ್. ಇವುಗಳು ದೇಹ ಸೇರಿದ ನಂತರದಲ್ಲಿ ನಿಧಾನವಾಗಿ ಜೀರ್ಣವಾಗುತ್ತದೆ. ಇದರಿಂದ ನಿಮಗೆ ಶಕ್ತಿ ಮತ್ತು ಚೈತನ್ಯ ನಿಧಾನವಾಗಿ ಸಿಗುತ್ತದೆ ಮತ್ತು ದೀರ್ಘಕಾಲ ಉಳಿಯುತ್ತದೆ. ಬೆಳಗಿನ ಉಪಹಾರದ ಸಮಯದಲ್ಲಿ ನೀವು ಕೆಂಪು ಬಾಳೆ ಹಣ್ಣು ತಿನ್ನುವ ಅಭ್ಯಾಸ ಮಾಡಿ ಕೊಳ್ಳಬಹುದು.

ಚರ್ಮದ ಆರೋಗ್ಯಕ್ಕೆ ಉತ್ತಮ

ಕೆಂಪು ಬಾಳೆಹಣ್ಣು ಕೇವಲ ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ಚರ್ಮಕ್ಕೂ ಕೂಡ ತುಂಬಾ ಒಳ್ಳೆಯದು. ಇದಕ್ಕಾಗಿ ನೀವು ಕೆಂಪು ಬಾಳೆಹಣ್ಣನ್ನು ತಿನ್ನಬಹುದು ಅಥವಾ ಸ್ಕಿನ್ ಪ್ಯಾಕ್ ತರಹ ಚರ್ಮದ ಮೇಲೆ ಅನ್ವಯಿಸಬಹುದು. ತುಂಬಾ ಜನರು ಇದನ್ನು ಓಟ್ಸ್ ಜೊತೆಗೆ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳುತ್ತಾರೆ. ಸ್ವಲ್ಪ ಜೇನುತುಪ್ಪ ಬೆರೆಸಿ ಮುಖದ ಮೇಲೆ ಅನ್ವಯಿಸಿದರೆ ಮತ್ತು ಕೆಲವು ನಿಮಿಷಗಳು ಒಣಗಲು ಬಿಟ್ಟು ಆನಂತರ ಮುಖ ತೊಳೆದುಕೊಂಡರೆ ನಿಮ್ಮ ಸೌಂದರ್ಯ ಹೆಚ್ಚಾಗುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ

ಇದರಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ತುಂಬಾ ಹೆಚ್ಚಾಗಿದೆ. ಆರೋಗ್ಯಕರವಾದ ರೋಗ ನಿರೋಧಕ ಶಕ್ತಿ ನಿಮಗೆ ಸಿಗಬೇಕು ಎಂದರೆ ಪ್ರಮುಖವಾಗಿ ಇಂತಹ ವಿಟಮಿನ್ ಪ್ರಮಾಣ ನಿಮ್ಮ ದೇಹಕ್ಕೆ ಸೇರಬೇಕು. ಕಾಯಿಲೆಯ ಸಂದರ್ಭಗಳಲ್ಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಮತ್ತು ನಿಮ್ಮ ದೇಹ ಮತ್ತಷ್ಟು ಸೋಂಕಿಗೆ ಒಳಗಾಗದೇ ಇರಲು ನೀವು ಕೆಂಪು ಬಾಳೆ ಹಣ್ಣು ತಿನ್ನುವ ಅಭ್ಯಾಸ ಮಾಡಿಕೊಳ್ಳಬಹುದು.

ಕಿಡ್ನಿಗಳಿಗೆ ಒಳ್ಳೆಯದು

ಕೆಂಪು ಬಾಳೆ ಹಣ್ಣುಗಳಲ್ಲಿ ಪೊಟ್ಯಾಶಿಯಂ ಅಂಶದ ಪ್ರಮಾಣ ತುಂಬಾ ಹೇರಳವಾಗಿ ಕಂಡುಬರುತ್ತದೆ. ಕಿಡ್ನಿಗಳಲ್ಲಿ ಕಲ್ಲುಗಳು ಉಂಟಾಗುವ ಸಾಧ್ಯತೆಯನ್ನು ಇದು ತಡೆಯುತ್ತದೆ. ಮನುಷ್ಯನಿಗೆ ಮೂಳೆಗಳು ಗಟ್ಟಿ ಬರುವಂತೆ ಸಹಕಾರಿಯಾಗುವ ಕ್ಯಾಲ್ಸಿಯಂ ಅಂಶವನ್ನು ದೇಹದಲ್ಲಿ ಹಿಡಿದಿಡುವ ಕೆಲಸವನ್ನು ಕಿಡ್ನಿಗಳು ಮಾಡುತ್ತವೆ. ಹೀಗಾಗಿ ಕೆಂಪು ಬಾಳೆಹಣ್ಣು ತಿನ್ನುವುದರ ಮೂಲಕ ಮುಂದಿನ ದಿನಗಳಲ್ಲಿ ಆಸ್ಟಿಯೋಪೋರೋಸಿಸ್ ನಂತಹ ಸಮಸ್ಯೆಗಳನ್ನು ಎದುರಿಸುವುದು ತಪ್ಪುತ್ತದೆ.

ಅನಿಮಿಯ ಸಮಸ್ಯೆ ಇಲ್ಲವಾಗುತ್ತದೆ

ನಿಮಗೆ ಯಾವಾಗ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಎದುರಾಗುತ್ತದೆ ಆಗ ಅನಿಮಿಯಾ ಎನ್ನುವ ಸಮಸ್ಯೆ ಬರುತ್ತದೆ. ಕೆಂಪು ಬಾಳೆ ಹಣ್ಣಿನಲ್ಲಿ ಅಪಾರ ಪ್ರಮಾಣದ ಕಬ್ಬಿಣದ ಅಂಶವಿದೆ. ಇದು ನಿಮ್ಮ ದೇಹದಲ್ಲಿ ಕೆಂಪು ರಕ್ತಕಣಗಳನ್ನು ಸೇರಿಕೊಂಡು ಹಿಮೋಗ್ಲೋಬಿನ್ ಉತ್ಪತ್ತಿ ಮಾಡಿ ಒಂದು ಬದಿಯಿಂದ ಮತ್ತೊಂದು ಬದಿಗೆ ರಕ್ತನಾಳಗಳ ಮೂಲಕ ತೆಗೆದುಕೊಂಡು ಹೋಗುತ್ತದೆ. ಕೆಂಪು ಬಾಳೆಹಣ್ಣುಗಳಲ್ಲಿ ವಿಟಮಿನ್ ಬಿ6 ಹೆಚ್ಚಾಗಿರುವುದರಿಂದ, ನಿಮ್ಮ ಅವಶ್ಯಕತೆಗೆ ಇದು ಸಾತ್ ಕೊಡುತ್ತದೆ.