ಮನೆ ರಾಜ್ಯ ಶ್ರೀಕೃಷ್ಣ ಜನ್ಮಾಷ್ಟಮಿ: ಪ್ರಧಾನಿ ಸೇರಿದಂತೆ ಗಣ್ಯರಿಂದ ಶುಭಾಶಯ

ಶ್ರೀಕೃಷ್ಣ ಜನ್ಮಾಷ್ಟಮಿ: ಪ್ರಧಾನಿ ಸೇರಿದಂತೆ ಗಣ್ಯರಿಂದ ಶುಭಾಶಯ

0

ಬೆಂಗಳೂರು: ಇಂದು ನಾಡಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಹಲವು ನಾಯಕರು ಶುಭಾಶಯ ಕೋರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮೋದಿ,  ಭಕ್ತಿ ಮತ್ತು ಸಂಭ್ರಮದ ಈ ಹಬ್ಬವು ಎಲ್ಲರಿಗೂ ಸಂತೋಷ, ಸಮೃದ್ಧಿ ಮತ್ತು ಅದೃಷ್ಟ ತರಲಿ ಎಂದು ಹೇಳಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು

ರಾಷ್ಟ್ರಪತಿ ನಾಡಿನ ಸಮಸ್ತ ನಾಗರಿಕರಿಗೆ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಹೃತ್ಪೂರ್ವಕ ಶುಭಾಶಯಗಳು. ಜನರ ಕಲ್ಯಾಣಕ್ಕಾಗಿ ನಿಸ್ವಾರ್ಥ ಕಾರ್ಯಗಳನ್ನು ಮಾಡಲು ಶ್ರೀಕೃಷ್ಣನ ಬದುಕು ನಮಗೆ ಕಲಿಸುತ್ತದೆ. ಈ ಪವಿತ್ರ ಹಬ್ಬವು ನಮ್ಮೆಲ್ಲರಿಗೂ ಸ್ಫೂರ್ತಿ ನೀಡಲಿ ಎಂದು ನಾನು ಬಯಸುತ್ತೇನೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂದೇಶ ಹಂಚಿಕೊಂಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸಕಲ ಮಾನವ ಸಂಕುಲವನ್ನು ಉದ್ಧರಿಸಲೆಂದು ಶ್ರೀ ಕೃಷ್ಣ ಭೂಮಿಯ ಮೇಲೆ ಜನ್ಮ ತಾಳಿದ ಶುಭ ದಿನ ಇಂದು. ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಭ ಕೋರಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ

ದ್ದರಾಮಯ್ಯ ಪುರಾಣದ ಪಾತ್ರಗಳಲ್ಲಿ ನನ್ನಿಷ್ಟದ ಪಾತ್ರ ಶ್ರೀಕೃಷ್ಣನದ್ದು, ರಾಮಮನೋಹರ ಲೋಹಿಯಾ ಬಣ್ಣಿಸಿದಂತೆ ಕೃಷ್ಣನದ್ದು ‘ಸಮುದ್ರ ಸಮನಾದ ಸಮೃದ್ಧ ವ್ಯಕ್ತಿತ್ವ”. ಈತ ನಿಜವಾದ ದೇವತಾ ಮನುಷ್ಯ. ಶ್ರೀಕೃಷ್ಣನ ಬದುಕು ಮತ್ತು ಸಾಧನೆ, ಸುಖ, ಶಾಂತಿ, ಸಮೃದ್ಧಿಯ ನಾಡನ್ನು ಕಟ್ಟಲು ನಮ್ಮೆಲ್ಲರಿಗೂ ಪ್ರೇರಣೆಯಾಗಲಿ ಎಂದು ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಶಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಕುಮಾರಸ್ವಾಮಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧೆಭಕ್ತಿಯಿಂದ ಆಚರಿಸೋಣ. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿದ ಜಗದೋದ್ಧಾರಕನನ್ನು ಪೂಜಿಸಿ ಪಾವನರಾಗೋಣ. ನಾಡಿನ ಸಮಸ್ತ ಜನರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಟ್ವಿಟರ್‌ನಲ್ಲಿ ಶುಭಾಶಯ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ನಾಡಿನ ಸಮಸ್ತ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಭಕ್ತಿಪೂರ್ವಕ ಶುಭಕಾಮನೆಗಳು. ನಾಡಿನ ಮೇಲೆ ಶ್ರೀಕೃಷ್ಣನ ಶ್ರೀರಕ್ಷೆ, ಅನುಗ್ರಹ ನಿರಂತರವಾಗಿರಲಿ, ಎಲ್ಲರಿಗೂ ದೇವರು ಮಂಗಳವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶಾಸಕ ಬಿ.ಎಸ್‌ ಯಡಿಯೂರಪ್ಪ ತಿಳಿಸಿದ್ದಾರೆ. ಹಿಂದೂ ಪಂಚಾಂಗದ ಪ್ರಕಾರ ಶ್ರೀಕೃಷ್ಣ ಈ ದಿನ ಜನಿಸಿದನೆಂದು ನಂಬಿಕೆ. ಈ ಹಿನ್ನೆಲೆಯಲ್ಲಿ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ.