ಮನೆ ರಾಜ್ಯ ಪೌರ ಕಾರ್ಮಿಕರ ನೌಕರಿ ಕಾಯಂಗೊಳಿಸಲು ನಿರ್ಧಾರ: ಸಚಿವ ಗೋವಿಂದ ಕಾರಜೋಳ ಭರವಸೆ

ಪೌರ ಕಾರ್ಮಿಕರ ನೌಕರಿ ಕಾಯಂಗೊಳಿಸಲು ನಿರ್ಧಾರ: ಸಚಿವ ಗೋವಿಂದ ಕಾರಜೋಳ ಭರವಸೆ

0

ಮೈಸೂರು(Mysuru): ಹೊರಗುತ್ತಿಗೆ ಏಜೆನ್ಸಿಗಳು ಪೌರ ಕಾರ್ಮಿಕರನ್ನು ಶೋಷಿಸುತ್ತಿರುವುದು ನೋವಿನ ಸಂಗತಿ. ಹೀಗಾಗಿಯೇ ಶೋಷಣೆ ಮುಕ್ತಗೊಳಿಸಲು ನೌಕರಿ ಕಾಯಂಗೊಳಿಸಲು ನಿರ್ಧರಿಸಿದ್ದೇವೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭರವಸೆ ನೀಡಿದರು.

ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಜಾಗೃತಿ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಇನ್ನೆರಡು ತಿಂಗಳಲ್ಲಿ ಕಾಯಂಗೊಳಿಸಿ ಸರ್ಕಾರಿ ನೌಕರರನ್ನಾಗಿ ಮಾಡಲಾಗುವುದು ಎಂದು ಹೇಳಿದರು.

ಕಾಯಂಗೊಳಿಸಲು ಎದುರಾಗಿರುವ ಕಾನೂನು ತೊಡಕು ನಿವಾರಣೆಗೆ ಕ್ರಮ ವಹಿಸಲಾಗಿದೆ. ಈಗಿರುವ ನೇಮಕಾತಿ ಕಾನೂನಿನ ಪ್ರಕಾರ ಶೇ 82ರಷ್ಟು ಹುದ್ದೆಗಳನ್ನು ಬೇರೆ ಸಮಾಜದವರಿಗೆ ಕೊಡಬೇಕು ಎಂದಿದೆ. ಆದರೆ, ಶೇ 100ರಷ್ಟು ನಮ್ಮ ಸಮಾಜದವರೇ ಬರಬೇಕು ಎನ್ನುವುದು ನಮ್ಮ ಆಶಯ. ಇದಕ್ಕಾಗಿ ವಿಶೇಷ ನೇಮಕಾತಿ ನಿಯಮ ರೂಪಿಸಲು ಸಮಿತಿ‌ ರಚಿಸಲಾಗಿದೆ. ತ್ವರಿತವಾಗಿ ವರದಿ ಪಡೆದು ಮುಖ್ಯಮಂತ್ರಿ ಕ್ರಮ ವಹಿಸಲಿದ್ದಾರೆ ಎಂದು ತಿಳಿಸಿದರು.

ನಗರ ಪ್ರದೇಶದಲ್ಲಿರುವ 52 ಸಾವಿರ ಪೌರಕಾರ್ಮಿಕರೆಲ್ಲರಿಗೂ ನ್ಯಾಯ ಒದಗಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಕೇವಲ 6ಸಾವಿರ ಪೌರಕಾರ್ಮಿಕರಿದ್ದಾರೆ ಎಂದು ವರದಿ ಕೊಟ್ಟಿರುವುದು ಸರಿಯಲ್ಲ. ಈ ಸಂಖ್ಯೆ ಕನಿಷ್ಠ 29 ಸಾವಿರವಾದರೂ ದಾಟಬೇಕು. ಆಯೋಗದ ಅಧ್ಯಕ್ಷರು ಎಲ್ಲ ಗ್ರಾ.ಪಂಗಳ ಅಧ್ಯಕ್ಷರು, ಅಧಿಕಾರಿಗಳ ಸಭೆ ನಡೆಸಿ ನಿಖರ ಮಾಹಿತಿ ಪಡೆದುಕೊಳ್ಳಬೇಕು. ಅಧಿಕಾರಿಗಳು ಅಸೆಡ್ಡೆಯಿಂದ ನೌಕರಿ ಮಾಡಬಾರದು ಎಂದು ಸೂಚಿಸಿದರು.

ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಸಫಾಯಿ‌ ಕರ್ಮಚಾರಿಗಳ ಮಕ್ಕಳಿಗೆ ಶೇ 5ರಷ್ಟು ಸೀಟುಗಳನ್ನು ಕೊಡಲಾಗುತ್ತದೆ. ಅದಕ್ಕೆ ತಗಲುವ ವೆಚ್ಚವನ್ನು ಸರ್ಕಾರ ಪಾವತಿಸುತ್ತದೆ. ಸಮಾಜದವರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯೆಯಿಂದ ಮಾತ್ರ ಬದುಕು ಬದಲಾವಣೆ ಆಗುತ್ತದೆ. ಹೀಗಾಗಿ, ಶೋಷಿತರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಕುಡಿತದ ಚಟಕ್ಕೆ ಒಳಗಾಗಬಾರದು. ಸ್ಥಳೀಯ ಸಂಸ್ಥೆಗಳವರು ಸ್ವಚ್ಛತೆಗಾಗಿ ಯಂತ್ರಗಳ ಖರೀದಿಗೆ ಕ್ರಮ ಕೈಗೊಳ್ಳಬೇಕು. ಐದಾರು ಸಾವಿರ ರೂಪಾಯಿ ಕೊಡುತ್ತಾರೆಂದು ಮಲದ ಗುಂಡಿಗಳಿಗೆ ಇಳಿಯಬಾರದು ಎಂದು ಕೋರಿದರು.

90 ಮಂದಿ ಮಲದ ಗುಂಡಿಗಿಳಿದು ಸಾವಿಗೀಡಾಗಿದ್ದಾರೆ. ಹೀಗಾಗಿ, ಯಂತ್ರಗಳನ್ನು ಹೊಂದಿಲ್ಲದ ಸಂಸ್ಥೆಗಳಿಗೆ ನೋಟಿಸ್ ಕೊಡಬೇಕು. ಅಲ್ಲಿನ ಅಧಿಕಾರಿಗಳಿಗೆ ದಂಡ ವಿಧಿಸಬೇಕು ಎಂದು ತಾಕೀತು ಮಾಡಿದರು.

ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪೌರಕಾರ್ಮಿಕರ 81 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ಮೇಯರ್ ಸುನಂದಾ ಫಾಲನೇತ್ರ ಮಾತನಾಡಿದರು. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್‌ ಸದಸ್ಯ ಸಿ.ಎನ್.ಮಂಜೇಗೌಡ, ನಿಗಮ–ಮಂಡಳಿಗಳ ಅಧ್ಯಕ್ಷರಾದ ಮಹದೇವಯ್ಯ, ಕಾ.ಪು.ಸಿದ್ದಲಿಂಗಸ್ವಾಮಿ, ಎಂ.ಶ್ರೀನಿವಾಸಗೌಡ, ಎಂ.ಶಿವಕುಮಾರ್, ರಘು ಕೌಟಿಲ್ಯ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಇದ್ದರು.