ಮಡಿಕೇರಿ (Madikeri): ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ಆರಂಭವಾಗಿದೆ.
ಸರ್ಕಾರದ ಆದೇಶದ ಮೇರೆಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುತ್ತಿದೆ. ಮೊಟ್ಟೆ ಎಸೆದ ಕಿಡಿಗೇಡಿಗಳ ಪತ್ತೆಗೆ ವಿಶೇಷ ತಂಡವನ್ನು ನೇಮಿಸಲಾಗಿದ್ದು, ಸ್ಥಳ ಪರಿಶೀಲನೆ ನಡೆಸಲಾಗಿದೆ.
ಚಾಮರಾಜನಗರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅವರನ್ನು ಉನ್ನತ ಮಟ್ಟದ ತನಿಖಾ ಅಧಿಕಾರಿಯಾಗಿ ರಾಜ್ಯ ಸರ್ಕಾರ ನೇಮಿಸಿದೆ ಎಂದು ಮೂಲಗಳು ತಿಳಿಸಿದೆ. ವಿಶೇಷ ಪೊಲೀಸ್ ತಂಡವು ಗುಡ್ಡೆಹೊಸೂರಿಗೆ ಆಗಮಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳು, ಪತ್ರಿಕೆಗಳ ವರದಿಗಳು ಸೇರಿದಂತೆ ಪ್ರಾಥಮಿಕ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ.
ಏತನ್ಮಧ್ಯೆ, ಸಿದ್ದರಾಮಯ್ಯ ಅವರ ವಾಹನದ ಮೇಲೆ ಮೊಟ್ಟೆ ಎಸೆದ ಆರೋಪಿ ಸಂಪತ್ ವಿರುದ್ಧ ರಾಜಕೀಯ ಪಕ್ಷಗಳಲ್ಲಿ ಆರೋಪ ಮತ್ತು ಪ್ರತ್ಯಾರೋಪಗಳು ಮುಂದುವರೆದಿವೆ. ಸೋಮವಾರಪೇಟೆಯಲ್ಲಿರುವ ಸಂಪತ್ ಅವರ ನಿವಾಸಕ್ಕೆ ಪೊಲೀಸರಿಂದ ಭದ್ರತೆಯನ್ನು ನೀಡಲಾಗಿದ್ದು, ಸಂಪತ್ ಕೊಡಗಿನಲ್ಲಿಲ್ಲ ಎಂದು ಅವರ ಕುಟುಂಬ ಖಚಿತಪಡಿಸಿದ ನಂತರ ಭದ್ರತೆ ಹಿಂಪಡೆಯಲಾಗಿದೆ.