ಮನೆ ರಾಜ್ಯ ಬೆಂಗಳೂರು ವಿಶ್ವವಿದ್ಯಾಲಯದ ನಕಲಿ ಅಂಕಪಟ್ಟಿ ಮಾರಾಟ: ಇಬ್ಬರ ಬಂಧನ

ಬೆಂಗಳೂರು ವಿಶ್ವವಿದ್ಯಾಲಯದ ನಕಲಿ ಅಂಕಪಟ್ಟಿ ಮಾರಾಟ: ಇಬ್ಬರ ಬಂಧನ

0

ಬೆಂಗಳೂರು (Bengaluru): ಬೆಂಗಳೂರು ವಿಶ್ವವಿದ್ಯಾಲಯದ ಪದವಿಯ ನಕಲಿ ಅಂಕಪಟ್ಟಿಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರ್‌. ಟಿ. ನಗರ ನಿವಾಸಿ ಅಯೂಬ್‌ ಪಾಷಾ ಹಾಗೂ ಚಿಕ್ಕಬಳ್ಳಾಪುರದ ನಂದಿ ಗ್ರಾಮದ ಖಲೀಲ್‌ ಬಂಧಿತ ಆರೋಪಿಗಳು. ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಇದುವರೆಗೂ ಆರು ಮಂದಿಗೆ ನಕಲಿ ಅಂಕಪಟ್ಟಿ ನೀಡಿರುವುದು ತಿಳಿದುಬಂದಿದೆ.

ಆರೋಪಿಗಳಿಂದ ಬೆಂಗಳೂರು ವಿಶ್ವವಿದ್ಯಾಲಯದ ಬಿಕಾಂ, ಬಿಬಿಎಂ, ಪಿಯುಸಿ, ಎಸ್ಸೆಸ್ಸೆಲ್ಸಿಯ ನಕಲಿ ಅಂಕ ಪಟ್ಟಿಗಳನ್ನು ಜಪ್ತಿ ಮಾಡಲಾಗಿದೆ. ನಕಲಿ ಅಂಕಪಟ್ಟಿ ದಂಧೆಯಲ್ಲಿ ಖಲೀಲ್‌ 18 ವರ್ಷಗಳ ಹಿಂದೆ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದ. ಅಯೂಬ್‌ ಕೂಡ ಬಂಧಿತನಾಗಿ ಜೈಲು ಸೇರಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರೂ ನ್ಯಾಯಾಲಯದಿಂದ ಖುಲಾಸೆ ಆಗಿದ್ದರು.

ಶೇಷಾದ್ರಿ ಪುರಂನ ಸಿರೂರ್‌ ಪಾರ್ಕ್ ಬಳಿ ನಕಲಿ ಅಂಕ ಪಟ್ಟಿ ಮಾರಾಟ ಮಾಡುತ್ತಿರುವ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಆರೋಪಿ ಅಯೂಬ್‌ ಪಾಷಾನನ್ನು ಬಂಧಿಸಿದ್ದಾರೆ. ಖಾಸಗಿ ಕಂಪನಿಯ ನೌಕರ ಗಜ ರಾಜ ಎಂಬವರನ್ನು ಪರಿಚಯ ಮಾಡಿಕೊಂಡಿದ್ದ ಅಯೂಬ್‌, ಎರಡು ಲಕ್ಷ ರೂ. ನೀಡಿದರೆ ಬೆಂಗಳೂರು ವಿಶ್ವವಿದ್ಯಾಲಯದ ಬಿಕಾಂ ಪದವಿಯ ನಕಲಿ ಅಂಕಪಟ್ಟಿ ನೀಡುವುದಾಗಿ ನಂಬಿಸಿದ್ದ. ಇದಕ್ಕೆ ಗಜರಾಜ ಒಪ್ಪಿಕೊಂಡಿದ್ದರಿಂದ ಶಿರೂರು ಪಾರ್ಕ್ ಬಳಿ ನಕಲಿ ಅಂಕಪಟ್ಟಿ ನೀಡಲು ಅಯೂಬ್‌ ಆಗಮಿಸಿದ್ದ. ಈ ವೇಳೆ ದಾಳಿ ನಡೆಸಿ ಆತನನ್ನು ಬಂಧಿಸಲಾಗಿದೆ. ಪೊಲೀಸರು ಅಯೂಬ್‌ ಪಾಷಾನನ್ನು ವಿಚಾರಣೆಗೆ ಒಳಪಡಿಸಿದಾಗ ಖಲೀಲ್‌ ಪಾತ್ರದ ಬಗ್ಗೆಯೂ ಬಾಯ್ಬಿಟ್ಟಿದ್ದರಿಂದ ಆತನನ್ನೂ ಬಂಧಿಸಿದ್ದಾರೆ.

ಆರೋಪಿಗಳಿಬ್ಬರು ಕೆಲ ವರ್ಷಗಳಿಂದ ನಕಲಿ ಅಂಕಪಟ್ಟಿ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಖಾಸಗಿ ಕಂಪನಿ ನೌಕರರನ್ನು ಪರಿಚಯ ಮಾಡಿಕೊಂಡು ಅವರ ಬಳಿ ಹಣ ಪಡೆದು ನಕಲಿ ಅಂಕಪಟ್ಟಿ ನೀಡುತ್ತಿದ್ದರು. ನಕಲಿ ಅಂಕಪಟ್ಟಿ ಪಡೆದು ವಿದೇಶಗಳಲ್ಲಿಯೂ ಕೆಲಸ ಗಿಟ್ಟಿಸಬಹುದು ಎಂದು ಭರವಸೆ ನೀಡಿ ವಂಚಿಸುತ್ತಿದ್ದರು ಎಂದು ಅಧಿಕಾರಿ ಹೇಳಿದರು.

ಆರೋಪಿ ಖಲೀಲ್‌ ಯಾರಾದರೂ ಒಬ್ಬ ವಿದ್ಯಾರ್ಥಿಯ ಅಸಲಿ ಅಂಕ ಪಟ್ಟಿಯನ್ನು ವಿವಿ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳುತ್ತಿದ್ದ. ಬಳಿಕ ಕೋರಲ್‌ ಡ್ರಾ ಮೂಲಕ ಅಸಲಿ ಅಂಕಪಟ್ಟಿಯಲ್ಲಿರುವ ಫೋಟೋ ಎಡಿಟ್‌ ಮಾಡಿ ನಕಲಿ ವಿದ್ಯಾರ್ಥಿಯ ಫೋಟೋ ಅಟ್ಯಾಚ್‌ ಮಾಡುತ್ತಿದ್ದ. ಅದೇ ಮಾದರಿಯಲ್ಲಿ ಹೆಸರು ಹಾಗೂ ಅಂಕಗಳನ್ನು ತಿದ್ದಿ ಅದನ್ನು ಪ್ರಿಂಟ್‌ ಹಾಕಿಸಿ ಹಣ ಕೊಟ್ಟವರಿಗೆ ಮಾರಾಟ ಮಾಡುತ್ತಿದ್ದ ಎಂದು ಅಧಿಕಾರಿ ವಿವರಿಸಿದರು.

ಅಯೂಬ್‌ ಕೆಲ ವರ್ಷಗಳಿಂದ ಅಮೆರಿಕ, ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ. ಕೋವಿಡ್‌ ಪೂರ್ವದಲ್ಲಿ ನಗರಕ್ಕೆ ವಾಪಸ್‌ ಆಗಿದ್ದ. ಮತ್ತೊಬ್ಬ ಆರೋಪಿ ಖಲೀಲ್‌ ಅಕ್ವೇರಿಯಂ ಮಾರಾಟ ವ್ಯವಹಾರ ನಡೆಸುತ್ತಿದ್ದ. ಇಬ್ಬರೂ ಕೆಲ ತಿಂಗಳಿನಿಂದ ಪುನಃ ನಕಲಿ ಅಂಕಪಟ್ಟಿ ಸೃಷ್ಟಿಸಿ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.