ಮನೆ ಸುದ್ದಿ ಜಾಲ ನಾಗವಾಲ ಗ್ರಾಮ ಪಂಚಾಯತಿಯನ್ನು ತ್ಯಾಜ್ಯ ಮುಕ್ತ ಮಾಡಲು ಎಲ್ಲರು ಕೈ ಜೋಡಿಸಿ

ನಾಗವಾಲ ಗ್ರಾಮ ಪಂಚಾಯತಿಯನ್ನು ತ್ಯಾಜ್ಯ ಮುಕ್ತ ಮಾಡಲು ಎಲ್ಲರು ಕೈ ಜೋಡಿಸಿ

0

ಮೈಸೂರು (Mysuru): ನಾಗವಾಲ ಗ್ರಾಮ ಪಂಚಾಯತಿಯನ್ನು ತ್ಯಾಜ್ಯ ಮುಕ್ತ, ನೈರ್ಮಲ್ಯ ಗ್ರಾಮ ಪಂಚಾಯತಿ ಮಾಡುವ ನಿಟ್ಟಿನಲ್ಲಿ ಎಲ್ಲರು ಕೈಜೋಡಿಸುವಂತೆ ಶಾಸಕರಾದ ಜಿ.ಟಿ.ದೇವೇಗೌಡ ಅವರು ಕರೆ ನೀಡಿದರು.

ಮೈಸೂರು ತಾಲ್ಲೂಕು ಇಲವಾಲ ಹೋಬಳಿ ನಾಗವಾಲ ಗ್ರಾಮದಲ್ಲಿ ಹಸಿರು ದಳ ಸಂಸ್ಥೆ, ಬೆಂಗಳೂರಿನ ಸ್ಟೋನ್ ಸೂಪ್ ಟ್ರಸ್ಟ್, ಎಸ್.ಡಬ್ಲ್ಯೂ.ಎಂ.ಆರ್.ಟಿ., ಎಸ್.ವಿ.ಪಿ. ಇಂಡಿಯಾ, ರೋಟರಿ ವೆಸ್ಟ್ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮೊದಲ ಬಾರಿಗೆ ಮೈಸೂರು ತಾಲ್ಲೂಕಿನ ನಾಗವಾಲ ಗ್ರಾಮ ಪಂಚಾಯತಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಹಿಳೆಯರಲ್ಲಿ ಕರೆ ನೀಡಿದರು.

ಕಳೆದ ಮೂರು ವರ್ಷಗಳಿಂದ ಮುಟ್ಟಿನ ನೈರ್ಮಲ್ಯ ಮತ್ತು ಮರುಬಳಕೆಯ ಮುಟ್ಟಿನ ಆಯ್ಕೆಗಳ ತರಬೇತಿಗಳನ್ನು ನಗರ ಮತ್ತು ಗ್ರಾಮೀಣ ಭಾಗದ ಶಾಲಾ ಕಾಲೇಜು ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ತರಬೇತಿ ನೀಡುತ್ತಾ ಬಂದಿರುವ ಹಸಿರು ದಳ ಸಂಸ್ಥೆಯವರಿಗೆ ಹಾಗೂ ಈ ಕಾರ್ಯಕ್ರಮವನ್ನು ಕೈಗೊಂಡಿರುವ ಎಲ್ಲಾ ಸಂಘ ಸಂಸ್ಥೆಗಳಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸಿದರು.

ಹಸಿರು ದಳ ಸಂಸ್ಥೆಯವರು ಮೊದಲು ನಾಗವಾಲ ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಗಳ ಹೆಣ್ಣು ಮಕ್ಕಳು ಮತ್ತು ಮಹಿಳೆಯರುಗಳಿಗೆ ಮುಟ್ಟಿನ ನೈರ್ಮಲ್ಯದ ತರಬೇತಿಗಳನ್ನು ನೀಡಿ ಬಟ್ಟೆ ಪ್ಯಾಡುಗಳು ಮತ್ತು ಮುಟ್ಟಿನ ಕಪ್ಪುಗಳನ್ನು ಬಳಸಲು ವಿಧಾನವನ್ನು ಕುರಿತು ತರಬೇತಿ, ನೀಡಿ ನಂತರ ಉಚಿತವಾಗಿ ವಿತರಣೆ ಮಾಡಲಿದ್ದಾರೆ.

ಸಮಾರಂಭದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಆರ್.ಪೂರ್ಣಿಮ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಗಿರೀಶ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ನರೇಂದ್ರ, ಮುಖಂಡರಾದ ಬೊಮ್ಮೇನಹಳ್ಳಿ ಕುಮಾರ್, ಗ್ರಾಮ ಪಂಚಾಯತಿ ಸದಸ್ಯರುಗಳು, ಪಿ.ಡಿ.ಓ. ಡಾ.ಶೋಭರಾಣಿ ಹಾಜರಿದ್ದರು.