ಮನೆ ರಾಷ್ಟ್ರೀಯ ಭಾರತ್ ಜೋಡೊ ಯಾತ್ರೆಯ ಲೋಗೊ, ವೆಬ್’ಸೈಟ್ ಬಿಡುಗಡೆ

ಭಾರತ್ ಜೋಡೊ ಯಾತ್ರೆಯ ಲೋಗೊ, ವೆಬ್’ಸೈಟ್ ಬಿಡುಗಡೆ

0

ನವದೆಹಲಿ: ಕಾಂಗ್ರೆಸ್‌ ಪಕ್ಷದ ಬೃಹತ್‌ ಪಾದಯಾತ್ರೆ ‘ಭಾರತ್‌ ಜೋಡೊ ಯಾತ್ರೆ’ಯ ಲೋಗೊ ಮತ್ತು ವೆಬ್‌ಸೈಟ್‌ ಅನ್ನು ಬಿಡುಗಡೆ ಮಾಡಲಾಗಿದ್ದು, ಯಾತ್ರೆಯು ಸೆಪ್ಟಂಬರ್‌ 7 ರಿಂದ ಕನ್ಯಾಕುಮಾರಿಯಿಂದ ಆರಂಭಗೊಳ್ಳಲಿದೆ.

ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ, ಸಾಮಾಜಿಕ ಧ್ರುವೀಕರಣ ಮತ್ತು ರಾಜಕೀಯ ವಿಭಜನೆಗಳಂತಹ ಸಮಸ್ಯೆಗಳ ವಿರುದ್ಧ ಹೋರಾಡಿ ರಾಷ್ಟ್ರವನ್ನು ಒಗ್ಗೂಡಿಸುವ ಉದ್ದೇಶದಿಂದ ಭಾರತ್‌ ಜೋಡೊ ಯಾತ್ರೆ ಕೈಗೊಂಡಿರುವುದಾಗಿ ಕಾಂಗ್ರೆಸ್‌ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಪಾದಯಾತ್ರೆಯ ಬಗ್ಗೆ ಮಾಹಿತಿ ನೀಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ಭಾರತ್‌ ಜೋಡೊ ಯಾತ್ರೆಯು ದಕ್ಷಿಣದ ಕನ್ಯಾಕುಮಾರಿಯಿಂದ ಆರಂಭಗೊಂಡು ಉತ್ತರದ ಕಾಶ್ಮೀರದ ವರೆಗೆ ಸುಮಾರು 3,570 ಕಿ.ಮೀ. ದೂರವನ್ನು ಕ್ರಮಿಸಲಿದೆ ಎಂದರು.

ಸೆಪ್ಟಂಬರ್‌ 7ಕ್ಕೆ ಯಾತ್ರೆಗೆ ಚಾಲನೆ ಸಿಗಲಿದ್ದು, ಪೂರ್ಣಗೊಳ್ಳಲು ಸುಮಾರು 5 ತಿಂಗಳ ಅವಧಿಯನ್ನು ತೆಗೆದುಕೊಳ್ಳಲಿದೆ ಎಂದರು.ಪಾದಯಾತ್ರೆಯು 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಮೂಲಕ ಹಾದು ಹೋಗಲಿದೆ. ಜೊತೆಯಲ್ಲೇ ಇತರೆ ರಾಜ್ಯಗಳಲ್ಲೂ ‘ಭಾರತ್‌ ಜೋಡೊ ಯಾತ್ರೆ’ಯನ್ನು ಪ್ರಾದೇಶಿಕವಾಗಿ ನಡೆಸಲಾಗುವುದು ಎಂದು ಜೈರಾಮ್‌ ರಮೇಶ್‌ ತಿಳಿಸಿದರು.

ತಮಿಳುನಾಡಿನ ಕನ್ಯಾಕುಮಾರಿಯಿಂದ ಯಾತ್ರೆ ಆರಂಭಗೊಳ್ಳಲಿದೆ. ಬಳಿಕ ತಿರುವನಂತಪುರ, ಕೊಚ್ಚಿ, ನೀಲಂಬೂರ್, ಮೈಸೂರು, ಬಳ್ಳಾರಿ, ರಾಯಚೂರು, ವಿಕಾರಾಬಾದ್‌, ನಾಂದೇಡ್‌, ಜಲಗಾಂವ್‌, ಇಂಧೋರ್‌, ಕೋಟಾ, ದೌಸಾ, ಅಳ್ವಾರ್‌, ಬುಲಂದಶಹರ್‌, ದೆಹಲಿ, ಅಂಬಾಲಾ, ಪಠಾಣ್‌ಕೋಟ್‌, ಜಮ್ಮು ಬಳಿಕ ಕಾಶ್ಮೀರದಲ್ಲಿ ಸಮಾಪ್ತಿಗೊಳ್ಳಲಿದೆ.