ಮನೆ ರಾಜ್ಯ ವೈದ್ಯರ ಸುರಕ್ಷತೆಗೆ ಸರ್ಕಾರ ಕಟಿಬದ್ಧ: ಸಚಿವ ಡಾ.ಕೆ.ಸುಧಾಕರ್‌

ವೈದ್ಯರ ಸುರಕ್ಷತೆಗೆ ಸರ್ಕಾರ ಕಟಿಬದ್ಧ: ಸಚಿವ ಡಾ.ಕೆ.ಸುಧಾಕರ್‌

0

ಬೆಂಗಳೂರು (Bengaluru): ವೈದ್ಯರಿಗೆ ಭದ್ರತೆ ನೀಡಲು ಹಾಗೂ ಅವರ ಸುರಕ್ಷತೆಗಾಗಿ ಕ್ರಮ ಕೈಗೊಳ್ಳಲು ಸರ್ಕಾರ ಕಟಿಬದ್ಧವಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಬೆಂಗಳೂರು ಮೆಡಿಕಲ್‌ ಕಾಲೇಜಿನಲ್ಲಿ ʼಯುವ ಸಂವಾದʼ ಕಾರ್ಯಕ್ರಮದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಚಿವರು, ವೈದ್ಯರ ಮೇಲೆ ಹಲ್ಲೆ ಮಾಡಿದ ಪ್ರಕರಣಗಳಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಹಲ್ಲೆ ಕಡಿಮೆಯಾಗಿದ್ದು, ಜಾಗೃತಿ ಮೂಡುತ್ತಿದೆ ಎಂದರು.

ಇಂದಿನ ವೈದ್ಯಕೀಯ ವಿದ್ಯಾರ್ಥಿಗಳು ಕೋವಿಡ್‌ ಸಾಂಕ್ರಾಮಿಕದ ಪರಿಸ್ಥಿತಿಯ ಹೊಸ ಅನುಭವವನ್ನು ಗಳಿಸಿದ್ದಾರೆ. ಕಳೆದ ನೂರು ವರ್ಷದ ಹಿಂದಿನ ಬ್ಯಾಚ್‌ ಕೂಡ ಈ ಸನ್ನಿವೇಶದ ಸವಾಲನ್ನು ಎದುರಿಸಿರಲಿಲ್ಲ. ಆದ್ದರಿಂದ 2020ನೇ ಸಾಲಿನಲ್ಲಿ ವ್ಯಾಸಂಗ ಮಾಡಿ ವೈದ್ಯಕೀಯ ವಿದ್ಯಾರ್ಥಿಗಳು ಈ ದೊಡ್ಡ ಸವಾಲನ್ನು ಎದುರಿಸುವ ಉತ್ತಮ ಅನುಭವಗಳಿಸಿದ್ದಾರೆ ಎಂದರು.

ಎಂಜಿನಿಯರಿಂಗ್‌ನಂತೆ ಹೆಚ್ಚು ಮೆಡಿಕಲ್‌ ಕಾಲೇಜುಗಳನ್ನು ಆರಂಭಿಸುವುದರಿಂದ ಬೇಡಿಕೆ ಇಳಿಕೆಯಾಗಿ ನಿರುದ್ಯೋಗ ಉಂಟಾಗುವುದಿಲ್ಲವೇ ಎಂದು ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಹಿಂದೆ 2,300 ಜನಸಂಖ್ಯೆಗೆ ಒಬ್ಬ ವೈದ್ಯರಿದ್ದರು. ಈಗ 900 ಜನಸಂಖ್ಯೆಗೆ ಒಬ್ಬ ವೈದ್ಯರಿದ್ದಾರೆ. ಆಯುಷ್‌ ವೈದ್ಯರನ್ನು ಸೇರಿಸಿದರೆ ಈ ಸಂಖ್ಯೆ 700 ಕ್ಕೆ ಇಳಿಯುತ್ತದೆ. 130 ಕೋಟಿ ಜನರು ಇರುವ ದೇಶದಲ್ಲಿ ಹೆಚ್ಚಿನ ಮೆಡಿಕಲ್‌ ಕಾಲೇಜುಗಳು ಬೇಕಾಗುತ್ತದೆ. ಅಲ್ಲದೆ, ಮೆಡಿಕಲ್‌ ಟೂರಿಸಂ ಕೂಡ ಈಗ ಬೆಳೆಯುತ್ತಿದೆ. ಒಂದು ಮೆಡಿಕಲ್‌ ಕಾಲೇಜಿಗೆ 750 ಕೋಟಿ ರೂ. ನಷ್ಟು ಖರ್ಚಾಗುತ್ತದೆ. ಈ ಹೊರೆ ಕಡಿಮೆ ಮಾಡಲು ಪಿಪಿಪಿ ಮಾದರಿಯಲ್ಲಿ ಕಾಲೇಜು ನಿರ್ಮಿಸುವ ಪ್ರಸ್ತಾಪವಿದೆ ಎಂದರು.

ಇನ್ನು ರಾಜ್ಯದಲ್ಲಿ ಇನ್ನೂ 9 ಜಿಲ್ಲೆಗಳಲ್ಲಿ ಸರ್ಕಾರಿ ಮೆಡಿಕಲ್‌ ಕಾಲೇಜುಗಳಿಲ್ಲ. ಆದ್ದರಿಂದ ಸರ್ಕಾರದ ಪಾಲು ಇರುವ ಮೆಡಿಕಲ್‌ ಕಾಲೇಜುಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ದಾವಣಗೆರೆ, ಉಡುಪಿ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂತಹ ಕಾಲೇಜು ಆರಂಭಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಎಂಜಿನಿಯರಿಂಗ್‌ನಂತೆ ವೈದ್ಯ ಕ್ಷೇತ್ರದಲ್ಲಿ ಉದ್ಯೋಗ ಇಳಿಕೆಯಾಗುವುದಿಲ್ಲ. ವೈದ್ಯರಿಗೆ ಇನ್ನಷ್ಟು ಹೆಚ್ಚು ಅವಕಾಶಗಳು ಸೃಷ್ಟಿಯಾಗುತ್ತಿವೆ. ವೈದ್ಯರಿಗೆ ನಿರುದ್ಯೋಗ ಸಮಸ್ಯೆ ಎಂದಿಗೂ ಎದುರಾಗುವುದಿಲ್ಲ ಎಂದರು.