ಕೊಡಗು(Kodagu): ಜಿಲ್ಲೆಯಲ್ಲಿ ಎರಡು ಪಕ್ಷಗಳ ಒಳಜಗಳದಿಂದಾಗಿ ಅಶಾಂತಿಯ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಮಡಿಕೇರಿಯ ಪ್ರಮುಖ ಬೀದಿಗಳಲ್ಲಿ ಪೊಲೀಸರು ಪಥ ಸಂಚಲನ ಮಾಡಿದರು.
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತದ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಒಳಗೊಳಗೆ ಕೆಂಡ ಕಾರುತ್ತಿವೆ. ಜಿಲ್ಲೆಯ ಜನರ ಹಿತದೃಷ್ಟಿಯಿಂದ ಎರಡು ಪಕ್ಷಗಳ ಗಲಾಟೆಗೆ ಬ್ರೇಕ್ ಹಾಕಿರುವ ಜಿಲ್ಲಾಡಳಿತ ಸೆಕ್ಷನ್ 144 ಜಾರಿ ಮಾಡಿದೆ. ಸಭೆ, ಸಮಾರಂಭ, ಪ್ರತಿಭಟನೆ ನಡೆಯದಂತೆ ಮೂರು ದಿನಗಳ ಕಾಲ ನಿರ್ಬಂಧ ಹೇರಲಾಗಿದೆ.
ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಮಡಿಕೇರಿಯ ಪ್ರಮುಖ ನಗರಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು. ಕುಶಾಲನಗರ, ವಿರಾಜಪೇಟೆ, ಸೋಮವಾರ ಪೇಟೆ, ಪೋನ್ನಪೇಟೆ ಭಾಗದಲ್ಲಿ ಕೂಡ ಪಥಸಂಚಲನ ಮಾಡಿ ನಿಮ್ಮ ಜೊತೆ ನಾವಿದ್ದೇವೆ. ಭಯ ಪಡುವ ಅಗತ್ಯ ಇಲ್ಲ ಎಂದು ಸಾರ್ವಜನಿಕರಿಗೆ ಧೈರ್ಯ ತುಂಬಿದರು.
ಜಿಲ್ಲೆಯಲ್ಲಿ ಒಟ್ಟು 20 ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಮಡಿಕೇರಿಯಲ್ಲೇ 16 ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ತಡೆಯಲು ಈಗಾಗಲೇ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.