ಮನೆ ರಾಜ್ಯ ಸರ್ಕಾರದಿಂದ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಆಚರಣೆ: ಸಿಎಂ ಬೊಮ್ಮಾಯಿ

ಸರ್ಕಾರದಿಂದ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಆಚರಣೆ: ಸಿಎಂ ಬೊಮ್ಮಾಯಿ

0

ತುಮಕೂರು (Tumkuru): ಮುಂದಿನ ವರ್ಷದಿಂದ ತಿಗಳ ಸಮುದಾಯದ ಮೂಲಪುರುಷ ಹಾಗೂ ಆರಾಧ್ಯ ದೈವ ಅಗ್ನಿ ಬನ್ನಿರಾಯಸ್ವಾಮಿ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ನಗರದಲ್ಲಿ ಹಮ್ಮಿಕೊಂಡಿದ್ದ ತಿಗಳ ಕ್ಷತ್ರಿಯರ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ವತಿಯಿಂದ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಆಚರಿಸಬೇಕು ಎಂಬ ಬೇಡಿಕೆ ಸಾಕಷ್ಟು ವರ್ಷಗಳಿಂದ ಇದೆ. ಇನ್ನು ಮುಂದೆ ಸರ್ಕಾರದಿಂದಲೇ ಆಚರಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ತಿಗಳ ಸಮುದಾಯ ಪ್ರವರ್ಗ 2(ಎ) ರಲ್ಲಿ ಮೀಸಲಾತಿ ಸೌಲಭ್ಯ ಪಡೆಯುತ್ತಿದ್ದು, ಇದರ ಬದಲಾಗಿ ಪ್ರವರ್ಗ–1ರಲ್ಲಿ ಮೀಸಲಾತಿ ಕಲ್ಪಿಸಬೇಕು ಎಂಬ ಬೇಡಿಕೆಗೆ ಸ್ಪಂದಿಸಿದ ಮುಖ್ಯಮಂತ್ರಿ, ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವಂತಹ ನಿರ್ಧಾರ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಅಗತ್ಯ ನೆರವು ಸಿಗಲಿದೆ ಎಂದು ತಿಳಿಸಿದರು.

ಜಿಲ್ಲೆ ಸೇರಿದಂತೆ ವಿವಿಧೆಡೆ ತಿಗಳ ಸಮುದಾಯದಿಂದ ನಿರ್ಮಾಣ ಮಾಡುತ್ತಿರುವ ಸಮುದಾಯ ಭವನಗಳನ್ನು ಪೂರ್ಣಗೊಳಿಸಲು ಸಹಕಾರಿಯಾಗುವಂತೆ 12.30 ಕೋಟಿ ರೂ. ಅನುದಾನವನ್ನು ಶೀಘ್ರ ಮಂಜೂರು ಮಾಡಲಾಗುವುದು. ಇದರಿಂದ ಅಪೂರ್ಣಗೊಂಡಿರುವ 23 ಸಮುದಾಯ ಭವನಗಳನ್ನು ಪೂರ್ಣಗೊಳಿಸಲು ನೆರವಾಗಲಿದೆ ಎಂದು ಹೇಳಿದರು.

ಅಧ್ಯಯನ ಪೀಠ:

ತಿಗಳ ಸಮುದಾಯದ ಇತಿಹಾಸ, ಆಚರಣೆ ಸೇರಿದಂತೆ ಜನಾಂಗದ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿ ಜನರಿಗೆ ತಿಳಿಸಿಕೊಡುವುದು ಹಾಗೂ ಮಾಹಿತಿಯನ್ನು ದಾಖಲಿಸಿಡುವ ಸಲುವಾಗಿ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ‘ತಿಗಳರ ಅಧ್ಯಯನ ಪೀಠ’ ಸ್ಥಾಪಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.