ಮನೆ ಕ್ರೀಡೆ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಷಿಪ್‌: ನಾಲ್ಕರ ಘಟ್ಟ ತಲುಪಿದ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಜೋಡಿ

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಷಿಪ್‌: ನಾಲ್ಕರ ಘಟ್ಟ ತಲುಪಿದ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಜೋಡಿ

0

ಟೋಕಿಯೊ (Tokyo): ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ಜೋಡಿ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿದೆ.

ಇದರೊಂದಿಗೆ ಟೂರ್ನಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಪುರುಷರ ಡಬಲ್ಸ್‌ನಲ್ಲಿ ಪದಕ ಖಚಿತಪಡಿಸಿದ್ದಾರೆ. ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನದಲ್ಲಿರುವ ಚಿರಾಗ್–ಸಾತ್ವಿಕ್‌ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ 24-22, 15-21, 21-14ರಿಂದ ಜಪಾನ್‌ನ ತಕುರೊ ಹೊಕಿ–ಯುಗೊ ಕೊಬಾಯಶಿ ಸವಾಲು ಮೀರಿದರು. ಚಿರಾಗ್– ಸಾತ್ವಿಕ್ ಅವರಿಗೆ ಸೆಮಿಫೈನಲ್‌ನಲ್ಲಿ ಮಲೇಷ್ಯಾದ ಆ್ಯರನ್‌ ಚಿಯಾ– ಸೊಹ್ ವೂಯಿ ಯಿಕ್ ಎದುರು ಸೆಣಸಲಿದೆ.

ಕ್ವಾರ್ಟರ್‌ಫೈನಲ್‌ ಪಂದ್ಯದ ಆರಂಭದಲ್ಲೇ ಭಾರತದ ಜೋಡಿ ಬಿರುಸಿನ ಆಟಕ್ಕೆ ಮೊರೆಹೋಯಿತು. 12–5ರಿಂದ ಮುನ್ನಡೆ ಸಾಧಿಸಿತು. ಬಳಿಕ ಸತತ ಏಳು ಪಾಯಿಂಟ್ಸ್‌ ಬಲದಿಂದ ಜಪಾನ್ ಆಟಗಾರರು 16–14ರ ಮೇಲುಗೈ ಸಾಧಿಸಿದರು. ತುರುಸಿನ ಪೈಪೋಟಿಯ ನಡುವೆ ಗೇಮ್ ಗೆಲ್ಲುವಲ್ಲಿ ಚಿರಾಗ್– ಸಾತ್ವಿಕ್ ಯಶಸ್ವಿಯಾದರು.

ಎರಡನೇ ಗೇಮ್‌ನಲ್ಲಿ ತಕುರೊ–ಯುಗೊ ತಿರುಗೇಟು ನೀಡಿದರು. ಒಂದು ಹಂತದಲ್ಲಿ 9–9ರಿಂದ ಸಮಬಲದಲ್ಲಿ ಸಾಗಿದ್ದ ಗೇಮ್‌ಅನ್ನು ಜಯದತ್ತ ಕೊಂಡೊಯ್ದರು. ನಿರ್ಣಾಯಕ ಮೂರನೇ ಗೇಮ್‌ನ ವಿರಾಮದ ವೇಳೆಗೆ ಭಾರತದ ಜೋಡಿ 11–5ರಿಂದ ಮುಂದಿತ್ತು. ಬಳಿಕ ಯುಗೊ ಹೊಡೆದ ಕೆಲವು ಬಿರುಸಿನ ಸ್ಮ್ಯಾಷ್‌ಗಳು ಗೇಮ್‌ನ ದಿಕ್ಕನ್ನು ಬದಲಿಸುವಂತೆ ಕಂಡವು. ಭಾರತದ ಆಟಗಾರರು 19–13ರಿಂದ ಮುನ್ನಡೆ ಸಾಧಿಸಿದಾಗ ಹಿಂದಿರುಗಿ ನೋಡಲಿಲ್ಲ. ಗೇಮ್ ಹಾಗೂ ಪಂದ್ಯ ಗೆದ್ದರು.

ಪುರುಷರ ಸಿಂಗಲ್ಸ್‌ನಲ್ಲಿ ಪದಕದ ಭರವಸೆ ಹುಟ್ಟುಹಾಕಿದ್ದ ಪ್ರಣಯ್‌ ಎಂಟರಘಟ್ಟದ ಪಂದ್ಯದಲ್ಲಿ 19-21, 21-6, 21-18ರಿಂದ ಚೀನಾದ ಜಾವೊ ಜುನ್ ಪೆಂಗ್ ಎದುರು ಮುಗ್ಗರಿಸಿದರು. ವಿಶ್ವ ಕ್ರಮಾಂಕದಲ್ಲಿ ಈ ಹಿಂದೆ ಎಂಟನೇ ಸ್ಥಾನದಲ್ಲಿದ್ದ ಭಾರತದ ಆಟಗಾರ, ಸೋತ ಹತಾಶೆಯಲ್ಲಿ ಮೊಣಕಾಲೂರಿ ತಲೆಬಾಗಿಸಿ ಕುಳಿತರು.

ಹಿಂದಿನ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಜಪಾನ್‌ನ ಕೆಂಟೊ ಮೊಮೊಟಾ ಮತ್ತು ಭಾರತದ ಲಕ್ಷ್ಯ ಸೇನ್ ಎದುರು ಪ್ರಣಯ್ ಗೆದ್ದಿದ್ದರು. ಈ ಪಂದ್ಯದಲ್ಲಿ ಮೊದಲ ಗೇಮ್‌ ಗೆದ್ದ ಲಾಭ ಪಡೆಯುವಲ್ಲಿ ಅವರು ಸಫಲರಾಗಲಿಲ್ಲ. ಹಲವು ಸ್ವಯಂಕೃತ ತಪ್ಪುಗಳೂ ಅವರ ಸೋಲಿಗೆ ಕಾರಣವಾದವು.

ಇದಕ್ಕೂ ಮೊದಲು ಎಂಟರಘಟ್ಟದ ಮತ್ತೊಂದು ಡಬಲ್ಸ್ ಸೆಣಸಾಟದಲ್ಲಿ ಎಂ.ಆರ್‌.ಅರ್ಜುನ್– ಧ್ರುವ ಕಪಿಲ ಜೋಡಿಯು 8–21, 14–21ರಿಂದ ಮೂರು ಬಾರಿಯ ಚಾಂಪಿಯನ್ಸ್, ಇಂಡೊನೇಷ್ಯಾದ ಮೊಹಮ್ಮದ್ ಎಹಸಾನ್‌– ಹೆಂಡಾ ಸೆಥಿಯಾವಾನ್ ಎದುರು ಎಡವಿತು.