ಚಿತ್ರದುರ್ಗ(Chitradurga): ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಮಾಡುತ್ತಿರುವ ಆರೋಪ ಶುದ್ಧ ಸುಳ್ಳು ಎಂದು ಮುರುಘಾ ಮಠದ ಸಲಹಾ ಸಮಿತಿಯ ಸದಸ್ಯ ಎನ್.ಬಿ.ವಿಶ್ವನಾಥ್ ತಿಳಿಸಿದ್ದಾರೆ.
ಶನಿವಾರ ಸಲಹಾ ಸಮಿತಿಯ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಂತಹ ಆರೋಪ ಬಂದಿರುವುದು ಆಘಾತವುಂಟು ಮಾಡಿದೆ. ಪೀಠಾಧ್ಯಕ್ಷರಿಗೆ ಮಾನಸಿಕ ಕಿರುಕುಳ ನೀಡುವ ಉದ್ದೇಶದಿಂದ ಈ ಪ್ರಕರಣ ಹೆಣೆಯಲಾಗಿದೆ ಎಂದು ಹೇಳಿದರು.
ಭಕ್ತರು, ಹಲವು ಸಮಾಜದ ಮುಖಂಡರು ಶರಣರನ್ನು ಭೇಟಿ ಮಾಡಿ ಚರ್ಚಿಸಿದ್ದೇವೆ. ಈ ಆರೋಪವನ್ನು ಶರಣರು ಸಂಪೂರ್ಣ ತಳ್ಳಿಹಾಕಿದ್ದಾರೆ ಎಂದು ಸ್ಪಷ್ಟಪಡಿಸಿದರು.
ದೂರಿನ ಹಿಂದೆ ಮುರುಘಾ ಮಠದ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಅವರ ಷಡ್ಯಂತ್ರ ಇದೆ. ಮಠಕ್ಕೆ ಮರಳಿದ ಅವರು ಪರಮಾಧಿಕಾರ ನಿರೀಕ್ಷೆ ಮಾಡಿದ್ದರು. ಹಲವು ಷರತ್ತುಗಳನ್ನು ವಿಧಿಸಿ ಮಠಕ್ಕೆ ಅವರಿಗೆ ಪ್ರವೇಶ ನೀಡಲಾಗಿತ್ತು. ಮಠದ ವಿರುದ್ಧ ನ್ಯಾಯಾಲಯದಲ್ಲಿ ಇರುವ ಪ್ರಕರಣ ಹಿಂಪಡೆಯುವ ಆಶ್ವಾಸನೆ ನೀಡಿದ್ದರು. ಆದರೆ, ಅದಕ್ಕೆ ತಕ್ಕಂತೆ ಅವರು ನಡೆದುಕೊಳ್ಳಲಿಲ್ಲ ಎಂದು ದೂರಿದರು.
ಶರಣರ ವಿರುದ್ಧ ಈವರೆಗೆ ಇಂತಹ ಆರೋಪ ಕೇಳಿ ಬಂದಿಲ್ಲ. ಮಕ್ಕಳು ಮತ್ತು ಮಹಿಳೆಯರ ಏಳಿಗೆಗೆ ಸ್ವಾಮೀಜಿ ಶ್ರಮಿಸಿದ್ದಾರೆ. ವಕೀಲರ ತಂಡವೊಂದು ಸ್ವಾಮೀಜಿ ಅವರೊಂದಿಗೆ ಚರ್ಚೆ ನಡೆಸಿದೆ. ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಲಾಗಿದೆ. ಪೊಲೀಸರು ತನಿಖೆ ನಡೆಸಿ ಅಪರಾಧ ನಡೆದಿದ್ದು ನಿಜವಾದರೆ ಮಾತ್ರ ಬಂಧಿಸಲಿ. ಏಕಾಏಕಿ ದುಡುಕಿದರೆ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.