ಮನೆ ದೇವಸ್ಥಾನ ಬೆನಕನ ಅಮಾವಾಸ್ಯೆ: ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನಿಗೆ ಕುಂಭಾಭಿಷೇಕ

ಬೆನಕನ ಅಮಾವಾಸ್ಯೆ: ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನಿಗೆ ಕುಂಭಾಭಿಷೇಕ

0

ಹನೂರು(Hanur) : ಸನ್ನಿಧಿಯಲ್ಲಿ ಶ್ರಾವಣ ಮಾಸ ಮುಕ್ತಾಯವಾದ ಹಿನ್ನೆಲೆ ಹಾಗೂ ಬೆನಕನ ಅಮಾವಾಸ್ಯೆ ಪ್ರಯುಕ್ತ ಶನಿವಾರ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪ ಸ್ವಾಮಿಗೆ ಕುಂಭಾಭಿಷೇಕವನ್ನು ಸಂಪ್ರದಾಯದಂತೆ ನೆರವೇರಿಸಲಾಯಿತು.

ಸಾಲೂರು ಬೃಹಾನ್ಮಠದ ಅಧ್ಯಕ್ಷ ವಿದ್ವಾನ್ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರ ಸಮ್ಮುಖದಲ್ಲಿ ಎಲ್ಲಾ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.

ಬೆನಕನ ಅಮಾವಾಸ್ಯೆ ಹಿನ್ನೆಲೆ ದೇಗುಲ ಗರ್ಭಗುಡಿ ಸೇರಿದಂತೆ ದೇವಸ್ಥಾನದ ಹೊರಾಂಗಣ ಬಸವ, ರುದ್ರಾಕ್ಷಿ ಹಾಗೂ ಹುಲಿವಾಹನದ ಉತ್ಸವ ವಾಹನಗಳನ್ನು ವಿವಿಧ ಪುಷ್ಪ ಹಾಗೂ ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಸಾಂಪ್ರದಾಯದಂತೆ ಬೇಡಗಂಪಣ ಅರ್ಚಕರಿಂದ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ಹಾಗೂ ಕುಂಭಾಭಿಷೇಕವನ್ನು ಸಂಪ್ರದಾಯದಂತೆ ನೆರವೇರಿಸಲಾಯಿತು.

ಎಣ್ಣೆ ಮಜ್ಜನ ಸೇವೆ: ಬೆನಕನ ಅಮಾವಾಸ್ಯೆಯಿಂದಲೇ ಶುಕ್ರವಾರ ರಾತ್ರಿ ಮಾದಪ್ಪನ ಸನ್ನಿಧಿಯಲ್ಲಿ ಸ್ವಾಮಿಗೆ ಬೇಡಗಂಪಣ ಅರ್ಚಕ ವೃಂದದವರಿಂದ ಎಣ್ಣೆ ಮಜ್ಜನ ಸೇವೆಯನ್ನು ನೆರವೇರಿಸಲಾಯಿತು. ಶನಿವಾರ ಶ್ರಾವಣ ಮಾಸ ಮುಕ್ತಾಯವಾದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಮುಂಜಾನೆ 3.30 6ರವರೆಗೆ ವಿಶೇಷ ಪೂಜೆಯನ್ನು ಸಲ್ಲಿಸುವುದರ ಮೂಲಕ 108 ಬೇಡಗಂಪಣ ಅರ್ಚಕರಿಂದ ಮಾದಪ್ಪನಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪ್ರದಾಯಿಕ ಕುಂಭಾಭಿಷೇಕವನ್ನು ನೆರವೇರಿಸಲಾಯಿತು.

ಶನಿವಾರ ಬೆಳಗ್ಗೆ 9:30 ರಲ್ಲಿ ಬೇಡಗಂಪಣ ಸಮುದಾಯದ 108 ಅರ್ಚಕರು ಮಂಗಳವಾದ್ಯ ಸತ್ತಿಗೆ ಸೂರಪಾನಿ, ಛತ್ರಿ ಚಾಮರದೊಂದಿಗೆ ದೇಗುಲದ ಸಮೀಪವಿರುವ ಮಜ್ಜನ ಬಾವಿಗೆ ತೆರಳಿ ಧಾರ್ಮಿಕ ವಿಧಿ ವಿಧಾನದ ಮೂಲಕ ಶಿವ ಪಾರ್ವತಿ ವಿಗ್ರಹ ಮೂರ್ತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.

ಬಳಿಕ ಕಳಸಗಳಿಗೆ ನೀರು ತುಂಬಿ ಪೂಜೆಯನ್ನು ಸಲ್ಲಿಸಿದ್ದ 108 ಕುಂಭ ಕಳಸವನ್ನು ಹೊತ್ತ ಅರ್ಚಕರು ಮೆರವಣಿಯ ಮೂಲಕ ದೇಗುಲಕ್ಕೆ ಆಗಮಿಸಿ ಪ್ರದಕ್ಷಿಣೆ ಹಾಕಿದರು. ನಂತರ ಕುಂಭ ಕಳಸವನ್ನು ಗರ್ಭಗುಡಿಗೆ ತಂದು ವಿಶೇಷ ಪೂಜೆಯನ್ನು ಸಲ್ಲಿಸಿ ಸ್ವಾಮಿಗೆ ಅಭಿಷೇಕವನ್ನು ನೆರವೇರಿಸಿ ಮಹಾ ಮಂಗಳಾರತಿ ಬೆಳಗಿಸುವುದರ ಮೂಲಕ ಕುಂಭಾಭಿಷೇಕವನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ, ಉಪ ಕಾರ್ಯದರ್ಶಿ ಬಸವರಾಜು, ಪ್ರಧಾನ ಆಗಮಿಕ ಕರವೀರ ಸ್ವಾಮಿ, ಲೆಕ್ಕಾಧಿಕ್ಷಕ ಪ್ರವೀಣ್ ಪಾಟೀಲ್, ದ್ವಿತೀಯ ದರ್ಜೆ ಸಹಾಯಕ ಮಹಾದೇವಸ್ವಾಮಿ ಪ್ರಾಧಿಕಾರದ ನೌಕರರು ದೇಗುಲದ ಸಿಬ್ಬಂದಿಗಳು ಹಾಜರಿದ್ದರು.