ಮನೆ ರಾಜ್ಯ ಬೆಂಗಳೂರು-ಮೈಸೂರು ದಶಪಥ ಬಂದ್‌: ಪರ್ಯಾಯ ಮಾರ್ಗ ಬಳಕೆಗೆ ಸೂಚನೆ

ಬೆಂಗಳೂರು-ಮೈಸೂರು ದಶಪಥ ಬಂದ್‌: ಪರ್ಯಾಯ ಮಾರ್ಗ ಬಳಕೆಗೆ ಸೂಚನೆ

0

ರಾಮನಗರ (Ramnagar): ಮೂರು ದಿನ ಬೆಂಗಳೂರು-ಮೈಸೂರು ದಶಪಥ ಬಂದ್‌ ಆಗಲಿದ್ದು, ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸಲು ಸೂಚಿಸಲಾಗಿದೆ.

ಶುಕ್ರವಾರ ರಾತ್ರಿ ಸುರಿದ ಕುಂಭದ್ರೋಣ ಮಳೆಗೆ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದಾಗಿ ಹೆದ್ದಾರಿ ಬಂದ್‌ ಆಗಿದೆ. ಕುಂಬಳಗೋಡು ಕೆರೆ ಏರಿ ಒಡೆದು, ಹೆದ್ದಾರಿಯಲ್ಲಿ ನೀರು ಹರಿಯುತ್ತಿದೆ. ಚನ್ನಪಟ್ಟಣದ ತಿಟ್ಟಮಾರನಹಳ್ಳಿ ಕೆರೆ ಒಡೆದು ಹೆದ್ದಾರಿಯಲ್ಲಿ ನದಿಯಂತೆ ನೀರು ಹರಿಯುತ್ತಿದೆ. ಈ ಎರಡು ಪ್ರದೇಶಗಳೂ ರಾಮನಗರ ಜಿಲ್ಲೆಗೆ ಆಗಮನ ಹಾಗೂ ನಿರ್ಗಮನ ಪಾಯಿಂಟ್‌ ಆಗಿದ್ದು, ಈ ರಸ್ತೆಗಳಲ್ಲಿಯೇ ನೀರು ತುಂಬಿದೆ.

ಚನ್ನಪಟ್ಟಣ ತಾಲೂಕಿನ ಮತ್ತಿಕೆರೆ ಬಳಿಯ ಶೆಟ್ಟಿಹಳ್ಳಿ ಕೆರೆಯಿಂದ ಬರುವ ನೀರು ಹರಿದು ಹೋಗಲು ದೊಡ್ಡ ಕಾಲುವೆ ಇತ್ತು. ಆದರೆ, ಹೆದ್ದಾರಿ ಪ್ರಾಧಿಕಾರ ಅತಿಕ್ರಮಿಸಿಕೊಂಡು ರಸ್ತೆ ನಿರ್ಮಿಸಿರುವ ಕಾರಣ, ನೀರು ಹರಿದು ಹೋಗುವ ಮಾರ್ಗ ಮುಚ್ಚಿದ್ದು, ರಸ್ತೆ ಮೇಲೆ ನೀರು ಹರಿಯುತ್ತಿದೆ.

ಕುಂಬಳಗೂಡು ಬಳಿಯ ಕಣಮಿಣಕಿ ಭೂಬಿಕೆರೆ ಕೆರೆ ಏರಿ ಒಡೆದ ಪರಿಣಾಮ ಹೆದ್ದಾರಿಗೆ ನೀರು ನುಗ್ಗಿದೆ. ಕುಂಬಳಗೂಡಿನಿಂದ ಕೆಂಗೇರಿವರೆಗೆ ಟ್ರಾಫಿಕ್‌ ಸಮಸ್ಯೆಯಾಗಿದೆ. ಸತತ 5 ಗಂಟೆ ಕಾರ್ಯಾಚರಣೆ ಬಳಿಕ ಸವಾರಿಗೆ ದಾರಿ ಮಾಡಿಕೊಡಲಾಯಿತು. ಇದಾದ ಬಳಿಕ ರಾಮನಗರ ಜಿಲ್ಲಾ ಪೊಲೀಸ್‌ ಇಲಾಖೆ ರಸ್ತೆ ಸಂಚಾರ ಬಂದ್‌ ಮಾಡಿತು.

ಬೆಂಗಳೂರು – ಮೈಸೂರು ಮಾರ್ಗದಲ್ಲಿ ಸಂಚರಿಸುವವರು ಹಳೆ ರಸ್ತೆಯಲ್ಲಿ ಸಂಚರಿಸಬಹುದು. ಆದರೆ, ಸವಾರರೇ ರಿಸ್ಕ್‌ ಹೊರಬೇಕು. ಒಂದು ವೇಳೆ ಮಳೆ ಹೆಚ್ಚಾದರೆ, ಅವಘಡಗಳು ಸಂಭವಿಸಲಿದೆ. ರಾಮನಗರ ಜಿಲ್ಲಾ ಪೊಲೀಸರು ಸೂಚಿಸಿರುವ ಪರ್ಯಾಯ ಮಾರ್ಗಗಳು ಹೀಗಿವೆ.

ಬೆಂಗಳೂರಿನಿಂದ ನೆಲಮಂಗಲ, ಕುಣಿಗಲ್‌ ಮೂಲಕ ಹುಲಿಯೂರು ದುರ್ಗದ ಮಾರ್ಗವಾಗಿ ಮದ್ದೂರು ಇಲ್ಲವೇ ಮಂಡ್ಯ ತಲುಪಬಹುದು. ಇಲ್ಲವೇ, ಕುಣಿಗಲ್‌ ಮಾರ್ಗವಾಗಿ ಹಾಸನ, ಶ್ರೀರಂಗಪಟ್ಟಣ, ಮೈಸೂರು ತಲುಪಬಹುದು.

ಬೆಂಗಳೂರಿನಿಂದ ಕನಕಪುರ ರಸ್ತೆ ಮಾರ್ಗವಾಗಿ ಹಾರೋಹಳ್ಳಿ ತಲುಪಿ ಅಲ್ಲಿಂದ ರಾಮನಗರ, ಬಿಡದಿ ತಲುಪಬಹುದು. ಇಲ್ಲವೇ, ಹಾರೋಹಳ್ಳಿಯಿಂದ ನೇರವಾಗಿ ಸಾಗಿ ಕನಕಪುರ, ಸಾತನೂರು, ಮಳವಳ್ಳಿ, ಬನ್ನೂರು ಮಾರ್ಗವಾಗಿ ಮೈಸೂರು ತಲುಪಬಹುದು.