ನವದೆಹಲಿ (New Delhi): ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ನಿಷೇಧ ತೀರ್ಪಿನ ವಿರುದ್ಧ ಸಲ್ಲಿಸಲಾಗಿರುವ ಮೇಲ್ಮನವಿಗಳನ್ನು ನಾಳೆ (ಆಗಸ್ಟ್ 29) ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ನ್ಯಾಯಮೂರ್ತಿ ಹೇಮಂತ್ ಗುಪ್ತಾ ನೇತೃತ್ವದ ದ್ವಿಸದಸ್ಯ ಪೀಠ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದರ ಮೇಲಿನ ನಿಷೇಧವನ್ನು ಎತ್ತಿಹಿಡಿದಿರುವ ಕರ್ನಾಟಕ ಹೈಕೋರ್ಟ್‌ನ ಆದೇಶದ ವಿರುದ್ಧದ ಮೇಲ್ಮನವಿಗಳ ವಿಚಾರಣೆ ನಡೆಸಲಿದೆ.
ಸರಕಾರಿ ಅಧಿಕಾರಿಗಳ ಮಲತಾಯಿ ಧೋರಣೆಯು ವಿದ್ಯಾರ್ಥಿಗಳ ನಂಬಿಕೆಯನ್ನು ಕಸಿದುಕೊಳ್ಳುತ್ತದೆ. ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಮಾಡುತ್ತದೆ. ಅನಗತ್ಯವಾಗಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಕಾರಣವಾಗುತ್ತದೆ ಎಂದು ಮೇಲ್ಮನವಿಯಲ್ಲಿ ಆರೋಪಿಸಲಾಗಿದೆ.
ಹೈಕೋರ್ಟ್‌ನ ತೀರ್ಪು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನೂ ಅರ್ಥಮಾಡಿಕೊಳ್ಳಲಾಗಿಲ್ಲ. ಭಾರತದ ಸಂವಿಧಾನದ 25ನೇ ವಿಧಿಯ ಅಡಿಯಲ್ಲಿ ನೀಡಲಾದ ಅಗತ್ಯ ಧಾರ್ಮಿಕ ಆಚರಣೆಗಳ ಮೂಲಭೂತ ಅಂಶಗಳಿಗೆ ಪೂರಕವಾಗಿಲ್ಲ. ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಆಚರಣೆಯಲ್ಲಿ ಅಗತ್ಯವಾಗಿದೆ ಎಂದು ಮೇಲ್ಮನವಿಯಲ್ಲಿ ಹೇಳಲಾಗಿದೆ.
ಹಿಜಾಬ್ ಧರಿಸಿ ಪ್ರವೇಶ ನಿರಾಕರಿಸಿದ್ದಕ್ಕಾಗಿ ಮುಸ್ಲಿಮ್ ವಿದ್ಯಾರ್ಥಿನಿಯರ ಗುಂಪು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್ ಮಾರ್ಚ್ 15 ರಂದು ತೀರ್ಪು ನೀಡಿತ್ತು. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ಹೈಕೋರ್ಟ್ ಪೀಠವು ಅರ್ಜಿಗಳನ್ನು ವಜಾಗೊಳಿಸುವಾಗ, ಹಿಜಾಬ್ ಅಭ್ಯಾಸವು ಇಸ್ಲಾಂ ಧರ್ಮದ ಅಡಿಯಲ್ಲಿ ಅತ್ಯಗತ್ಯವಾದ ಆಚರಣೆಯಲ್ಲ ಮತ್ತು ಆದ್ದರಿಂದ ಭಾರತದ ಸಂವಿಧಾನದ 25 ನೇ ಪರಿಚ್ಛೇದದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ. ಮಾರ್ಚ್ 15, 2022 ರಂದು ಸುಪ್ರೀಂ ಕೋರ್ಟ್‌ಗೆ ವಿವಿಧ ಅರ್ಜಿಗಳನ್ನು ಸಲ್ಲಿಸಲಾಯಿತು.
ಕರ್ನಾಟಕ ಸರ್ಕಾರವು ರಾಜ್ಯದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ನಿಷೇಧಿಸಿತ್ತು. ಇದನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಇದರ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆಯಾಗಿದೆ.