ಮೈಸೂರು(Mysuru): ಕ್ರೀಡಾಪಟುಗಳು ಕಷ್ಟ ಎದುರಾದಾಗ ಕುಗ್ಗಬಾರದು. ಪ್ರಯತ್ನಶೀಲರಾದಲ್ಲಿ ಜಯಶಾಲಿ ಆಗಬಹುದು ಎಂದು ಅಂತರರಾಷ್ಟ್ರೀಯ ಪ್ಯಾರಾ ಈಜುಪಟು ನಿರಂಜನ್ ಮುಕುಂದನ್ ತಿಳಿಸಿದರು.
ಕೇಂದ್ರದ ಸರ್ಕಾರದ ಕ್ರೀಡಾ ಮತ್ತು ಯುವಜನ ವ್ಯವಹಾರ ಇಲಾಖೆ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಯಾದವಗಿರಿಯ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಸ್ಮರಣಾರ್ಥವಾಗಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನ ಹಾಗೂ ‘ಮೀಟ್ ದಿ ಚಾಂಪಿಯನ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ರೀಡಾಪಟುಗಳು ಮುಖ್ಯವಾಗಿ ಧೈರ್ಯ ಬೆಳೆಸಿಕೊಳ್ಳಬೇಕು. ಸಮತೋಲನ ಆಹಾರ ಸೇವಿಸಬೇಕು. ನಿತ್ಯವೂ ಅಭ್ಯಾಸ ಮಾಡಬೇಕು. ಪ್ರತಿಕೂಲ ಪರಿಸ್ಥಿತಿಯನ್ನು ಲೆಕ್ಕಿಸದೆ ಮುನ್ನುಗ್ಗಬೇಕು ಎಂದು ಸಲಹೆ ನೀಡಿದರು.
ಭಾರತೀಯ ಕ್ರೀಡಾ ಪ್ರಾಧಿಕಾರದ ಸಹಾಯಕ ನಿರ್ದೇಶಕಿ ಡಾ.ಮೋನಿಕಾ ಉಪಸ್ಥಿತರಿದ್ದರು.
ವಿದ್ಯಾಶಾಲೆಯ ವಿದ್ಯಾರ್ಥಿಗಳು ವಿಶೇಷ ಈಜು ಕೌಶಲ ಪ್ರದರ್ಶಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂದೇಶದ ವಿಡಿಯೊ ಪ್ರದರ್ಶಿಸಲಾಯಿತು. ಕ್ರೀಡೆಗೆ ಸಂಬಂಧಿಸಿದಂತೆ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ಐವರು ವಿದ್ಯಾರ್ಥಿಗಳಿಗೆ ಒಲಿಂಪಿಕ್ಸ್ ಜರ್ಸಿಯನ್ನು ಬಹುಮಾನವಾಗಿ ವಿತರಿಸಲಾಯಿತು.
ಮೈಸೂರಿನ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ, ವಿದ್ಯಾಶಾಲೆಯ ಮುಖ್ಯಸ್ಥ ಸ್ವಾಮಿ ಯುಕ್ತೇಶಾನಂದ, ಪ್ರಾಂಶುಪಾಲ ಎಸ್.ಬಾಲಾಜಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಿ.ಸುದರ್ಶನ್ ಮತ್ತು ಬಿ.ಆರ್.ರವಿ ಇದ್ದರು.