ಮನೆ ಕಾನೂನು ನಿವೃತ್ತ ಸಿಜೆಐಗಳ ಕುರಿತ ಹೇಳಿಕೆ: ಪ್ರಶಾಂತ್ ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ಮುಕ್ತಾಯಗೊಳಿಸಿದ ಸುಪ್ರೀಂ

ನಿವೃತ್ತ ಸಿಜೆಐಗಳ ಕುರಿತ ಹೇಳಿಕೆ: ಪ್ರಶಾಂತ್ ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ಮುಕ್ತಾಯಗೊಳಿಸಿದ ಸುಪ್ರೀಂ

0

ವಕೀಲ ಪ್ರಶಾಂತ್ ಭೂಷಣ್ ಮತ್ತು ತೆಹಲ್ಕಾ ಸಂಸ್ಥಾಪಕ ತರುಣ್ ತೇಜ್‌ಪಾಲ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಕ್ಷಮಾಪಣೆ, ವಿವರಣೆಯನ್ನು ಪರಿಗಣಿಸಿ ಅವರ ವಿರುದ್ಧ 2009ರಲ್ಲಿ ಹೂಡಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಮುಕ್ತಾಯಗೊಳಿಸಿದೆ.
ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿಸೂರ್ಯ ಕಾಂತ್ ಮತ್ತು ಎಂ ಎಂ ಸುಂದ್ರೇಶ್ ಅವರಿದ್ದ ಪೀಠವು ಪ್ರಕರಣವನ್ನು ಮುಕ್ತಾಯಗೊಳಿಸುವ ವೇಳೆ ಈ ವಿಚಾರವನ್ನು ದಾಖಲಿಸಿಕೊಂಡಿತು.
ಇಬ್ಬರೂ ಕ್ಷಮೆ ಯಾಚಿಸಿರುವ ಹಿನ್ನೆಲೆಯಲ್ಲಿ ಪ್ರಕರಣ ಮುಂದುವೆರಸುವ ಅಗತ್ಯ ಇದೆ ಎಂದು ನಾವು ಭಾವಿಸುವುದಿಲ್ಲ” ಎಂದು ನ್ಯಾಯಾಲಯ ಹೇಳಿತು.
ಭೂಷಣ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, “ಕ್ಷಮೆ ಯಾಚಿಸಿರುವುದರಿಂದ ಪ್ರಕರಣವನ್ನು ಇನ್ನೂ ಮುಂದುವರೆಸುವ ಅಗತ್ಯವಿದೆಯೇ? ಹಾಗೆ ಮಾಡುವುದು ಮತ್ತಷ್ಟು ಗೊಂದಲಗೊಳಿಸಿದಂತೆ ಎಂಬುದಷ್ಟೇ ನನ್ನ ವಾದ” ಎಂದರು. ಪ್ರಕರಣ ಮುಕ್ತಾಯಗೊಳಿಸುವ ಮುನ್ನ ನ್ಯಾಯಾಲಯ ಈ ವಾದವನ್ನು ಒಪ್ಪಿತು.
2009 ರಲ್ಲಿ, ತರುಣ್‌ ತೇಜ್‌ಪಾಲ್‌ ಸಂಪಾದಕತ್ವದ ತೆಹಲ್ಕಾ ನಿಯತಕಾಲಿಕೆಗೆ ಸಂದರ್ಶನ ನೀಡಿದ್ದ ಪ್ರಶಾಂತ್‌ ಭೂಷಣ್ ಕಳೆದ ಹದಿನಾರು ಸಿಜೆಐಗಳಲ್ಲಿ ಎಂಟು ಮಂದಿ ಭ್ರಷ್ಟರು ಎಂದು ಆರೋಪಿಸಿದರು.
ಪ್ರಶಾಂತ್‌ ಭೂಷಣ್‌ ಅವರ ತಂದೆ ಹಿರಿಯ ನ್ಯಾಯವಾದಿ ಶಾಂತಿ ಭೂಷಣ್‌ ಅವರು ಭ್ರಷ್ಟ ಸಿಜೆಐಗಳ ಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು. ಹೀಗಾಗಿ ಅವರ ವಿರುದ್ಧ ನ್ಯಾಯಾಂಗ ಬಂಧನ ಪ್ರಕರಣ ದಾಖಲಿಸಲಾಗಿತ್ತು.
2009ರಲ್ಲಿ ಆರಂಭವಾಗಿದ್ದ ಪ್ರಕರಣ 2012ರಲ್ಲಿ ನೆನೆಗುದಿಗೆ ಬಿದ್ದಿತು. 2020 ರಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ಪ್ರಕರಣ ಆಲಿಸಲು ನಿರ್ಧರಿಸುತ್ತಿದ್ದಂತೆ ಅದಕ್ಕೆ ಮರುಜೀವ ಬಂದಿತ್ತು.
ಆದರೆ, ನ್ಯಾ. ಮಿಶ್ರಾ ಅವರ ನಿವೃತ್ತಿಯಿಂದಾಗಿ ವಿಚಾರಣೆ ಸಾಧ್ಯವಾಗಿರಲಿಲ್ಲ. ಬಳಿಕ ಪ್ರಕರಣವನ್ನು ಇಂದಿಗೆ ಪಟ್ಟಿ ಮಾಡಲಾಗಿತ್ತು.