ಮಂಡ್ಯ (Mandya): ಮಂಡ್ಯ ನಗರದ ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ (ಮೈಶುಗರ್) ನಾಲ್ಕು ವರ್ಷಗಳ ಬಳಿಕ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಪುನಾರಂಭಗೊಂಡಿದೆ.
ಮೈಶುಗರ್ನಲ್ಲಿ 2017 – 18ನೇ ಸಾಲಿನಲ್ಲಿ ಕಬ್ಬು ಅರೆದಿದ್ದೇ ಕೊನೆಯಾಗಿತ್ತು. ಹೀಗಾಗಿ ಕಾರ್ಖಾನೆ ಪುನಾರಂಭಕ್ಕೆ ಒತ್ತಾಯಿಸಿ ನಾಲ್ಕು ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದವು. ಅದರ ಫಲವಾಗಿ ಗುರುವಾರದಿಂದ ಮೈಶುಗರ್ನಲ್ಲಿ ಕ್ರಷಿಂಗ್ಗೆ ಚಾಲನೆ ನೀಡಲಾಗಿದೆ. ಕಾರ್ಖಾನೆ ಪುನಾರಂಭಗೊಂಡಿದ್ದಕ್ಕೆ ಮೈಶುಗರ್ ವ್ಯಾಪ್ತಿಯ ಕಬ್ಬು ಬೆಳೆಗಾರರು ನಿಟ್ಟುಸಿರು ಬಿಟ್ಟಿದ್ದಾರೆ.
ಮೈಶುಗರ್ನಲ್ಲಿ ಕಬ್ಬು ಅರೆಯುವಿಕೆಗೆ ಜಿಲ್ಲಾ ಉಸ್ತುವಾರಿ ಕೆ. ಗೋಪಾಲಯ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ. ಸಿ. ನಾರಾಯಣಗೌಡ ಗುರುವಾರ ಚಾಲನೆ ನೀಡಿದರು. ಕಬ್ಬಿನ ಜಲ್ಲೆಗಳನ್ನು ಯಂತ್ರಕ್ಕೆ ಹಾಕಿ, ಕ್ರೇನ್ ಚಾಲನೆಗೆ ಸ್ವಿಚ್ ಆನ್ ಮಾಡುವ ಮೂಲಕ ಕ್ರಷಿಂಗ್ಗೆ ಕಾರ್ಯಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಮೈಶುಗರ್ ಪುನಾರಂಭಕ್ಕೆ ಪೂರಕವಾಗಿ ಆಗಸ್ಟ್ 11 ರಂದು ಕಾರ್ಖಾನೆಯ ಬಾಯ್ಲರ್ಗೆ ಅಗ್ನಿ ಸ್ಪರ್ಷ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಸಚಿವ ಕೆ. ಸಿ. ನಾರಾಯಣಗೌಡ ಸೇರಿದಂತೆ ಜಿಲ್ಲೆಯ ಹಲವು ಜನಪ್ರತಿನಿಧಿಗಳು ಪಾಲ್ಗೊಂಡು, ವಾರದಲ್ಲಿ ಕ್ರಷಿಂಗ್ ಆರಂಭಗೊಳ್ಳಲಿದೆ. ಸ್ವತಃ ಮುಖ್ಯಮಂತ್ರಿಯವರೇ ಕ್ರಷಿಂಗ್ಗೆ ಚಾಲನೆ ನೀಡುವರು ಎಂದಿದ್ದರು.
ಆದರೆ, 20 ದಿನಗಳ ಬಳಿಕ ಪುನಾರಂಭಗೊಂಡ ಕಾರ್ಖಾನೆಯಲ್ಲಿ ಕ್ರಷಿಂಗ್ ಕಾರ್ಯಕ್ಕೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಚಾಲನೆ ನೀಡಿದರು. ಮುಖ್ಯಮಂತ್ರಿ ಭೇಟಿ ಕಾರ್ಯಕ್ರಮ ವಿಳಂಬವಾದ ಹಿನ್ನಲೆಯಲ್ಲಿ ಸಿಎಂ ಇಲ್ಲದೆ ಕ್ರಷಿಂಗ್ ಆರಂಭಿಸಲಾಗಿದೆ. ಆದರೆ, ಮತ್ತೊಂದು ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಖಾನೆಗೆ ಭೇಟಿ ನೀಡುವರು ಎಂದು ಕಾರ್ಖಾನೆ ಅಧಿಕಾರಿಗಳು, ಸಚಿವರು ಹೇಳಿದ್ದಾರೆ.
ಸಂಸದೆ ಸುಮಲತಾ ಅಂಬರೀಶ್, ಶಾಸಕರಾದ ಎಂ. ಶ್ರೀನಿವಾಸ್, ಸಿ. ಎಸ್. ಪುಟ್ಟರಾಜು, ಡಾ. ಕೆ. ಅನ್ನದಾನಿ, ದಿನೇಶ್ ಗೂಳಿಗೌಡ, ಮಧು ಜಿ. ಮಾದೇಗೌಡ, ಮಾಜಿ ಸಚಿವ ಎಂ. ಎಸ್. ಆತ್ಮಾನಂದ, ಜಿಲ್ಲಾಧಿಕಾರಿ ಎಸ್. ಅಶ್ವತಿ, ರೈತ ಹೋರಾಟಗಾರ್ತಿ ಸುನಂದಾ ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು.