ಮನೆ ರಾಜ್ಯ ಮುರುಘಾ ಮಠದ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಮೈಸೂರಿನಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ

ಮುರುಘಾ ಮಠದ ಪ್ರಕರಣ: ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಮೈಸೂರಿನಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ

0

ಮೈಸೂರು(Mysuru): ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿ ಶಿವಮೂರ್ತಿ ಮುರುಘಾ ಶರಣರಿಗೆ ಕಠಿಣ ಶಿಕ್ಷೆ ಆಗುವಂತೆ ನಿಷ್ಪಕ್ಷ್ಯಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಬಸವೇಶ್ವರ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚಿಂತಕ ಪ.ಮಲ್ಲೇಶ್‌ ಮಾತನಾಡಿ, ಮುರುಘಾ ಶರಣರ ವಿರುದ್ಧದ ಪ್ರಕರಣದಲ್ಲಿ ವಿರೋಧ ಪಕ್ಷಗಳು ಮೌನವಹಿಸಿರುವುದೇಕೆ? ಮತ ಬ್ಯಾಂಕ್‌ ರಾಜಕೀಯ ಕಾರಣಕ್ಕಾಗಿ ಪ್ರಭಾವಿಗಳ ಬಗ್ಗೆ ಮಾತನಾಡುತ್ತಿಲ್ಲ? ತನಿಖೆ ವಿಳಂಬವಾಗಿ ಆರಂಭವಾಗಿರುವುದು ಅಕ್ಷಮ್ಯ  ಎಂದರು.

ಈ ವೇಳೆ ಮಾತನಾಡಿದ ರಂಗಕರ್ಮಿ ಎಚ್‌.ಜನಾರ್ಧನ್‌,  ಪ್ರಕರಣದ ಎಲ್ಲ ಆರೋ‍ಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ನ್ಯಾಯಾಂಗ ತನಿಖೆ ಆಗಿ ತ್ವರಿತವಾಗಿ ಶಿಕ್ಷೆಯಾಗಬೇಕು ಎಂದರು.

ಮಕ್ಕಳಿಗೆ ಶಿಕ್ಷಣ ಹಾಗೂ ಆಶ್ರಯ ನೀಡಬೇಕಾದ ಮಠಗಳು ಅನೈತಿಕ ಹಾದಿಯತ್ತ ಸಾಗುತ್ತಿರುವುದು ನಾಚಿಕೆಗೇಡಿನ ಸಂಗತಿ. ಅಕ್ಷರ ದಾಸೋಹ ನೀಡುವ ನೆಪದಲ್ಲಿ ದೌರ್ಜನ್ಯ ನಡೆಸುತ್ತಿರುವ ಮಠಗಳನ್ನು ಸರ್ಕಾರವು ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಹೋರಾಟಗಾರ್ತಿ ರತಿರಾವ್, ಬಾಲಕಿಯ ಹಾಸ್ಟೆಲ್‌ಗಳಿಗೆ ಭದ್ರತೆ ಇಲ್ಲದಾಗಿದೆ. ಸಾವಿರಾರು ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಪೋಕ್ಸೊ ಪ್ರಕರಣ ದಾಖಲಾದ ವಾರದ ಬಳಿಕ ಆರೋಪಿ ಬಂಧನವಾಗಿರುವುದನ್ನು ಗಮನಿಸಿದರೆ ಸಂತ್ರಸ್ತ ಬಾಲಕಿಯರಿಗೆ ನ್ಯಾಯ ಸಿಗುವುದರ ಬಗ್ಗೆ ಅನುಮಾನ ವ್ಯಕ್ತವಾಗುತ್ತದೆ ಎಂಬ ಕಳವಳ ವ್ಯಕ್ತಪಡಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಜಗದೀಶ್‌ ಸೂರ್ಯ, ಹೊರೆಯಾಲ ದೊರೆಸ್ವಾಮಿ, ಜಿ.‍ಪಿ.ಬಸವರಾಜು, ರೈತಸಂಘದ ಹೊಸಕೋಟೆ ಬಸವರಾಜು, ಸ್ವರಾಜ್‌ ಇಂಡಿಯಾದ ಉಗ್ರ ನಗರಸಿಂಹೇಗೌಡ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಕೆ.ಬಸವರಾಜ್‌, ಲೇಖಕ ನಾ.ದಿವಾಕರ, ಅಖಿಲ ಭಾರತ ಮಹಿಳಾ ಒಕ್ಕೂಟದ ಮುಖಂಡರು ಸೀಮಾ, ಸಂಧ್ಯಾ, ಪಂಡಿತಾರಾಧ್ಯ, ದಸಂಸದ ಶಂಭುಲಿಂಗಸ್ವಾಮಿ, ಎಸ್‌ಎಫ್‌ಐ ಜಿಲ್ಲಾ ಸಂಚಾಲಕ ವಿಜಯ್‌ಕುಮಾರ್‌, ಸಂಗಯ್ಯ, ಮರಿದೇವಯ್ಯ ಇದ್ದರು.