ಬೆಂಗಳೂರು(Bengaluru): ಪರಿಶಿಷ್ಟ ಜಾತಿ ಹಾಗೂ ಪಂಗಡದ ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ರಾಜ್ಯ ಸರಕಾರ ಘೋಷಿಸಿದ್ದ 75 ಯುನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಇನ್ನಷ್ಟು ಸರಳಗೊಳಿಸಲು ನಿರ್ಧರಿಸಿರುವ ಸರ್ಕಾರ ಈ ಸಂಬಂಧ ಹೊರಡಿಸಿದ್ದ ಸುತ್ತೋಲೆಯನ್ನು ವಾಪಾಸ್ ಪಡೆದಿದೆ
ಈ ಯೋಜನೆಗೆ ಫಲಾನುಭವಿಗಳ ಆಯ್ಕೆಗಾಗಿ ಆಗಸ್ಟ್ 24 ರಂದು ಮಾನದಂಡಗಳನ್ನು ರೂಪಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ಈ ಪೈಕಿ ಕೆಲ ನಿಯಮಗಳು ಕಠಿಣವಾಗಿದ್ದರಿಂದ ಇಡೀ ವ್ಯವಸ್ಥೆಯನ್ನು ಸರಳಗೊಳಿಸಲು ಆಗಸ್ಟ್ 24ರಂದು ಹೊರಡಿಸಿದ್ದ ಸುತ್ತೋಲೆ ವಾಪಾಸ್ ತೆಗೆದುಕೊಳ್ಳಲಾಗಿದೆ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ.
ಅರ್ಹ ಫಲಾನುಭವಿ ತಾನು ವಾಸವಿರುವುದಕ್ಕೆ ಅಗತ್ಯ ದಾಖಲೆ, ಗ್ರಾಹಕರ ಐಡಿ ಸಂಖ್ಯೆ, ಬಾಡಿಗೆ ಅಥವಾ ಲೀಸಿನ ಕರಾರು ಪತ್ರದ ಜತೆಗೆ 250 ಯುನಿಟ್‌ಗಿಂತ ಹೆಚ್ಚು ವಿದ್ಯುತ್ ವ್ಯಯಿಸಿರಬಾರದು ಎಂದು ಹೇಳಲಾಗಿತ್ತು. ಇದರೊಂದಿಗೆ ಇನ್ನಷ್ಟು ದಾಖಲೆಗಳನ್ನು ನೀಡಬೇಕಾಗಿದ್ದರಿಂದ ಹಲವರಿಗೆ ಸಮಸ್ಯೆಯಾಗಿತ್ತು. ಇದನ್ನು ಗಮನಿಸಿದ ಇಂಧನ ಸಚಿವ ವಿ.ಸುನೀಲ್ ಕುಮಾರ್ ನಿಯಮಾವಳಿ ಸರಳಗೊಳಿಸುವಂತೆ ಸೂಚನೆ ನೀಡಿದ್ದರು.