ಮನೆ ರಾಜ್ಯ ಅತಿಕ್ರಮಣ ತೆರವುಗೊಳಿಸಿದರೆ ಹಲವು ಸಮಸ್ಯೆ ತಪ್ಪಿಸಬಹುದು: ಸಚಿವ ಜೆ.ಸಿ.ಮಾಧುಸ್ವಾಮಿ

ಅತಿಕ್ರಮಣ ತೆರವುಗೊಳಿಸಿದರೆ ಹಲವು ಸಮಸ್ಯೆ ತಪ್ಪಿಸಬಹುದು: ಸಚಿವ ಜೆ.ಸಿ.ಮಾಧುಸ್ವಾಮಿ

0

ಮೈಸೂರು(Mysuru): ಕೆರೆ ಸೇರಿದಂತೆ ಹಲವಾರು ಜಾಗಗಳನ್ನು ಒತ್ತುವರಿ ಮಾಡಿಕೊಂಡು ಬಡಾವಣೆ ನಿರ್ಮಿಸಿದ್ದೇವೆ. ಆ ಪರಿಣಾಮವಾಗಿ ಜನ ಜೀವನಕ್ಕೆ ತೊಂದರೆ ಆಗುತ್ತಿದೆ. ಅತಿಕ್ರಮಣ ತೆರವುಗೊಳಿಸಿದರೆ ಹಲವು ಸಮಸ್ಯೆಗಳನ್ನು ತಪ್ಪಿಸಬಹುದಾಗಿದೆ ಎಂದು ಎಂದು ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಸೋಮವಾರ ಮಾತನಾಡಿದ ಅವರು, ಕೆರೆಗಳು ಕೋಡಿ ಬೀಳುತ್ತಿರುವುದು ಸಂತೋಷದ ಬೆಳವಣಿಗೆ. ಕೆರೆಗಳು, ಮಳೆ ನೀರು ಹರಿಯುವ ಜಾಗ, ಕೋಡಿ ಹಳ್ಳ ಮೊದಲಾದವುಗಳನ್ನು ಒತ್ತುವರಿ ಮಾಡಿಕೊಂಡಿದ್ದೇವೆ. ಇವುಗಳನ್ನು ತೆರವುಗೊಳಿಸಿದರೆ ಸಮಸ್ಯೆಯಿಂದ ಪರಿಹಾರ ದೊರೆಯಬಹುದು ಎಂದು ತಿಳಿಸಿದರು.

ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಅಲ್ಲಲ್ಲಿ ಗ್ರಾಮಗಳು, ಜನವಸತಿಗಳು ಹಾಗೂ ಜಮೀನುಗಳು ಜಲಾವೃತವಾಗುತ್ತಿವೆ. ಹೀಗಾಗಿ, ಒತ್ತುವರಿ ಗುರುತಿಸಲು ಇದು ಸಕಾಲವಾಗಿದೆ ಎಂದರು.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳಲ್ಲಿ ಅಷ್ಟೇನೂ ಹಾನಿಯಾಗಿಲ್ಲ. ಸಮಸ್ಯೆ ಉಂಟಾದರೆ ಸಾಕಷ್ಟು ಹಣವಿದ್ದು ತಕ್ಷಣ ಸ್ಪಂದಿಸಲಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಮಹಾರಾಷ್ಟ್ರ-ಕರ್ನಾಟಕ ಗಡಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನಾವು ಸಮರ್ಥವಾಗಿ ವಾದ ಮಂಡಿಸಲಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ಮಹಾಜನ್ ವರದಿ ಜಾರಿಗೊಳಿಸಿದಾಗ ನಮಗೆ ತೃಪ್ತಿ ಇರಲಿಲ್ಲ. ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂಬ ಅಭಿಪ್ರಾಯ ಇತ್ತು. ಆದರೂ ಆ ವರದಿ ಒಪ್ಪಿಕೊಂಡಿದ್ದೇವೆ. ಮತ್ತೆ ಅದನ್ನು ತಿದ್ದುಪಡಿ ಮಾಡುವುದರಲ್ಲಿ ಅರ್ಥವಿಲ್ಲ. ನಾವು ಕಾನೂನು ಹೋರಾಟಕ್ಕೆ ಸಿದ್ಧವಾಗಿಲ್ಲ ಎನ್ನುವುದು ಸುಳ್ಳು. ಈಗಾಗಲೇ ಪರಿಣತ ವಕೀಲರ ತಂಡ ರಚಿಸಿದ್ದೇವೆ. ಈ ವಿಚಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಭೂ ಕಬಳಿಕೆ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದು ರೈತರಿಗೆ ವಿನಾಯಿತಿ ನೀಡಲಾಗುವುದು. ನಗರ ಪ್ರದೇಶದ ಪ್ರಕರಣಗಳ ವಿಷಯದಲ್ಲಿ ಯಥಾಸ್ಥಿತಿ ಮುಂದುವರಿಯಲಿದೆ. ಕಂದಾಯ ಇಲಾಖೆ ಅಧಿಕಾರಿಗಳೇ ವ್ಯಾಜ್ಯ ಬಗೆಹರಿಸಲಿದ್ದಾರೆ ಎಂದರು.

ವಿಧಾನಮಂಡಲ ಅಧಿವೇಶನದಲ್ಲಿ 7ರಿಂದ 8 ಕಾಯ್ದೆಗಳಿಗ ಅನುಮೋದನೆ ಪಡೆಯಲು ಚಿಂತನೆ ನಡೆಸಿದ್ದೇವೆ ಎಂದು ಪ್ರತಿಕ್ರಿಯಿಸಿದರು.