ಮನೆ ಕಾನೂನು ಮಗುವಿನ ಪಾಸ್‌ಪೋರ್ಟ್‌ಗೆ ತಂದೆಯ ಒಪ್ಪಿಗೆ ಅಗತ್ಯವಿಲ್ಲ: ಹೈಕೋರ್ಟ್‌

ಮಗುವಿನ ಪಾಸ್‌ಪೋರ್ಟ್‌ಗೆ ತಂದೆಯ ಒಪ್ಪಿಗೆ ಅಗತ್ಯವಿಲ್ಲ: ಹೈಕೋರ್ಟ್‌

0

ಬೆಂಗಳೂರು(Bengaluru): ದಂಪತಿ ನಡುವೆ ವೈವಾಹಿಕ ವ್ಯಾಜ್ಯ ಏರ್ಪಟ್ಟಿದ್ದಾಗ ಕೋರ್ಟ್ ಮಗುವನ್ನು ಪತ್ನಿಯ ವಶಕ್ಕೆ ಒಪ್ಪಿಸಿದ್ದರೆ ಆಗ ಪಾಸ್ ಪೋರ್ಟ್ ನೀಡಲು ತಂದೆಯ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.

ಬೆಂಗಳೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.

ಕೌಟುಂಬಿಕ ವ್ಯಾಜ್ಯದಲ್ಲಿ ತೊಡಗಿದ್ದ ಪ್ರಕರಣದಲ್ಲಿ ಮಗುವು ಸಂಪೂರ್ಣ ತಾಯಿಯ ಕಸ್ಡಡಿಯಲ್ಲಿದ್ದರೆ ಆಂತಹ ಸಂದರ್ಭಗಳಲ್ಲಿ ಪಾಸ್‌ ಪೋರ್ಟ್‌ ನೀಡಲು ತಂದೆಯ ಒಪ್ಪಿಗೆಬೇಕೆಂದು ಪಾಸ್‌ಪೋರ್ಟ್‌ ಅಧಿಕಾರಿ ಒತ್ತಾಯಪಡಿಸಬಾರದು ಎಂದು ಆದೇಶ ನೀಡಿದೆ.

ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯಪೀಠ, ತಮ್ಮ ಅರ್ಜಿ ವಜಾಗೊಳಿಸಿರುವ ಪಾಸ್‌ಪೋರ್ಟ್‌ ಅಧಿಕಾರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿ ಈ ಆದೇಶ ಮಾಡಿದೆ.

”ಪ್ರಾದೇಶಿಕ ಪಾಸ್‌ ಪೋರ್ಟ್‌ ಅಧಿಕಾರಿ ಅರ್ಜಿದಾರರು ಸಲ್ಲಿಸಿರುವ ಅರ್ಜಿಯನ್ನು ಅವರ ಮಾಜಿ ಪತಿಯ ಉಪಸ್ಥಿತಿ ಕೇಳದೆ ಅಥವಾ ಒಪ್ಪಿಗೆ ಕೇಳದೆ ಪಾಸ್‌ ಪೋರ್ಟ್‌ ಅರ್ಜಿಯನ್ನು ಪರಿಗಣಿಸಬೇಕು” ಎಂದು ನ್ಯಾಯಪೀಠ ಆದೇಶ ನೀಡಿದೆ.

ಅಲ್ಲದೆ, ಕೇವಲ ಪಾಸ್‌ ಪೋರ್ಟ್‌ ನೀಡುವುದರಿಂದ ಮಗುವಿನ ಭೇಟಿಯ ಹಕ್ಕನ್ನು ಸಂಪೂರ್ಣವಾಗಿ ನಿರಾಕರಿಸಿದಂತಾಗುವುದಿಲ್ಲ. ಪ್ರತಿವಾದಿಗಳ ಪರ ವಕೀಲರು, ಪಾಸ್‌ಪೋರ್ಟ್‌ ಪಡೆದು ಆನಂತರ ವೀಸಾ ಪಡೆದರೆ ಅವರು ವಿದೇಶಕ್ಕೆ ತೆರಳಿದರೆ ಪ್ರತಿವಾದಿಯ ಭೇಟಿ ಹಕ್ಕು ಮೊಟಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಅಂತಹ ಆತಂಕ ಅಗತ್ಯವಿಲ್ಲ, ಅವರು ಹಾಗೆ ವಿದೇಶಕ್ಕೆ ತೆರಳಬೇಕಾದರೆ ಕೌಟುಂಬಿಕ ನ್ಯಾಯಾಲಯದ ಪೂರ್ವಾನುಮತಿ ಪಡೆಯುತ್ತಾರೆ ಅಲ್ಲವೇ” ಎಂದು ನ್ಯಾಯಪೀಠ ಹೇಳಿದೆ. ಪ್ರಕರಣದ ವಿವರ: ಅರ್ಜಿದಾರರು ಮತ್ತು ಆಕೆಯ ಪತಿಯ ನಡುವೆ ಕೌಟುಂಬಿಕ ವ್ಯಾಜ್ಯವಿದೆ. ಕೌಟುಂಬಿಕ ನ್ಯಾಯಾಲಯ ಅವರಿಗೆ ವಿಚ್ಚೇದನ ನೀಡಿದೆ, ಆದರೆ ಮಗುವಿನ ಸುರ್ಪದಿ ಹಕ್ಕು ಕುರಿತ ವ್ಯಾಜ್ಯ ಬಾಕಿ ಇದ್ದು, ಸದ್ಯ ಮಗುವನ್ನು ತಾಯಿಗೆ ಸಂಪೂರ್ಣ ಸುಪರ್ದಿ ನೀಡಲಾಗಿದ್ದು, ತಂದೆಗೆ ಸೀಮಿತ ಭೇಟಿಯ ಹಕ್ಕು ಕೊಡಲಾಗಿದೆ.

ಈ ಮಧ್ಯೆ, ತಾಯಿ ಮಗುವಿಗೆ ಪಾಸ್‌ಪೋರ್ಟ್‌ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಪಾಸ್‌ಪೋರ್ಟ್‌ ಅಧಿಕಾರಿ, ಪಾಸ್‌ಪೋರ್ಟ್‌ ವಿತರಣೆ ಮಾಡಬೇಕಾದರೆ ತಂದೆ ಉಪಸ್ಥಿತರಿರಬೇಕು ಇಲ್ಲವೇ ಸಮ್ಮತಿ ನೀಡಬೇಕು, ಇಲ್ಲವಾದರೆ ಅರ್ಜಿ ಪರಿಗಣಿಸಲಾಗದು ಎಂದು ಹೇಳಿದ್ದರು. ಹಾಗಾಗಿ ಆ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದರು. ಅಲ್ಲದೆ, ಅರ್ಜಿದಾರರು ಪಾಸ್‌ಪೋರ್ಟ್‌ ಕೇವಲ ಪ್ರಯಾಣದ ದಾಖಲೆಯಾಗಿದೆ, ಕೇವಲ ಪಾಸ್‌ಪೋರ್ಟ್‌ ಇದ್ದರೆ ಸಾಲದು, ಅದನ್ನು ಆಧರಿಸಿ ಆತಿಥ್ಯ ನೀಡುವ ರಾಷ್ಟ್ರ ವೀಸಾ ನೀಡಿದರೆ ಮಾತ್ರ ವಿದೇಶ ಪ್ರವಾಸ ಕೈಗೊಳ್ಳಲು ಸಾಧ್ಯ ಎಂದು ಹೇಳಿದ್ದಾರೆ. ಹಾಗಾಗಿ ನಿಯಮಗಳ ಪ್ರಕಾರ ಪೋಸ್‌ ಪೋರ್ಟ್‌ ನೀಡಬಹುದು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.