ಮನೆ ರಾಜ್ಯ ಮೈಸೂರಿನ ಆರ್’ಬಿಐ ಆವರಣದಲ್ಲಿ ಚಿರತೆ ಪ್ರತ್ಯಕ್ಷ: ನೌಕರರು, ನಿವಾಸಿಗಳಲ್ಲಿ ಆತಂಕ

ಮೈಸೂರಿನ ಆರ್’ಬಿಐ ಆವರಣದಲ್ಲಿ ಚಿರತೆ ಪ್ರತ್ಯಕ್ಷ: ನೌಕರರು, ನಿವಾಸಿಗಳಲ್ಲಿ ಆತಂಕ

0

ಮೈಸೂರು (Mysuru): ಮೇಟಗಳ್ಳಿಯ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌’ಬಿಐ) ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಅಲ್ಲಿನ ನೌಕರರು ಮತ್ತು ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.

ಅಲ್ಲದೇ ಚಿರತೆ ಭಯದಿಂದಾಗಿ ಕೇಂದ್ರೀಯ ವಿದ್ಯಾಲಯಕ್ಕೆ ಸೆ. ೧ರಿಂದಲೇ ರಜೆ ಘೋಷಿಸಲಾಗಿದ್ದು, ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಡಚಣೆಯುಂಟಾಗಿದೆ.

ಕಳೆದ ಕೆಲ ದಿನಗಳಿಂದ ಎರಡು ಮರಿಗಳೊಂದಿಗೆ ಚಿರತೆ ರಾತ್ರಿ ವೇಳೆ ಆರ್‌’ಬಿಐ  ಆವರಣದಲ್ಲಿ ಓಡಾಡುತ್ತಿದ್ದು, ಅವುಗಳ ಚಲನವಲನ ಅಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಿಂದ ಆರ್‌’ಬಿಐ ಸಿಬ್ಬಂದಿ, ವಸತಿ ಗೃಹದ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.

ಆರ್‍’ಬಿಐ ಹಾಗೂ ಕೇಂದ್ರೀಯ ಶಾಲೆಯ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ತಂಡ, ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಲ್ಲದೆ, ಮೂರು ಪ್ರತ್ಯೇಕ ಸ್ಥಳಗಳಲ್ಲಿ ಬೋನ್ ಇಟ್ಟು, ಎಚ್ಚರ ವಹಿಸಿದ್ದಾರೆ.

ಚಿರತೆ ಸೆರೆಗೆ ಕ್ರಮ: ಈ ಸಂಬಂಧ ಡಿಸಿಎಫ್ ಕೆ. ಕಮಲ ಕರಿಕಾಳನ್ ಮಾತನಾಡಿ, ಚಿರತೆ ಓಡಾಡುತ್ತಿರುವ ಮಾಹಿತಿಯನ್ನು ಕಳೆದ ವಾರ ಅಲ್ಲಿನ ಅಧಿಕಾರಿಗಳು ಅರಣ್ಯ ಇಲಾಖೆಗೆ ನೀಡಿದ್ದಾರೆ. ಕೂಡಲೇ ನಮ್ಮ ಸಿಬ್ಬಂದಿಯನ್ನು ಕಳುಹಿಸಿ ಪರಿಶೀಲಿಸಲಾಗಿದೆ. ಒಂದು ಬೋನು ಇಟ್ಟು ಸೂಕ್ಷ್ಮವಾಗಿ ಪರಿಶೀಲಿಸಲಾಗಿತ್ತು. ಆದರೆ ಅಲ್ಲಿಂದ ಚಿರತೆ ಸುಳಿವು ಇರಲಿಲ್ಲ. ಒಂದೆರಡು ದಿನದ ಬಳಿಕ ಮತ್ತೆ ಓಡಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಈಗ ಮೂರು ಬೋನು ಇಟ್ಟು, ಚಿರತೆ ಸೆರೆಗೆ ಕ್ರಮ ಕೈಗೊಳ್ಳಲಾಗಿದೆ.

ಅಲ್ಲಿರುವ ಪೊದೆಗಳಲ್ಲಿ ಶೋಧಿಸಲಾಗುತ್ತಿದೆ. ಇದುವರೆಗೆ ಚಿರತೆ ಕಂಡುಬಂದಿಲ್ಲ. ಸಾಮಾನ್ಯವಾಗಿ ಚಿರತೆ ರಾತ್ರಿ ವೇಳೆ ಓಡಾಡುವ ಪ್ರಾಣಿಯಾಗಿದ್ದು, ಇದರಿಂದ ಅವುಗಳ ಸೆರೆ ಸಾಧ್ಯವಾಗಿಲ್ಲ. ಆದರೂ ಕಾರ್ಯಾಚರಣೆ ಮುಂದುವರೆಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪಶುವೈದ್ಯರ ತಂಡವನ್ನು ಕಾಯ್ದಿರಿಸಲಾಗಿದೆ. ಚಿರತೆ ಕಂಡು ಬಂದರೆ ಅರವಳಿಕೆ ಮದ್ದು ನೀಡಿ, ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕೇಂದ್ರೀಯ ವಿದ್ಯಾಲಯಕ್ಕೆ ರಜೆ ನೀಡುವ ಅವಶ್ಯಕತೆ ಇಲ್ಲ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದೇವೆ. ತರಗತಿಗಳು ನಡೆಯುವುದು ಹಗಲು ವೇಳೆಯಾಗಿರುವುದರಿಂದ ಚಿರತೆ ಹಗಲು ಓಡಾಡುವುದೇ ಇಲ್ಲ. ಹೀಗಾಗಿ ಶಾಲೆ ನಡೆಸುವಂತೆ ಸಲಹೆ ನೀಡಲಾಗಿದೆ. ಅಲ್ಲದೆ, ಸ್ಥಳದಲ್ಲಿ ಅರಣ್ಯ ಸಿಬ್ಬಂದಿ ಇರುವುದರಿಂದ ಯಾರೂ ಭಯ ಪಡುವ ಅಗತ್ಯವಿಲ್ಲ ಎಂದರು.