ಮನೆ ಶಿಕ್ಷಣ ತಂತ್ರಜ್ಞಾನದ ದುರ್ಬಳಕೆಯಿಂದಾಗುವ ಅನಾಹುತಗಳನ್ನು ಯೋಚಿಸಬೇಕಿದೆ: ಎ.ಎಸ್.ಕಿರಣ್‌ಕುಮಾರ್‌

ತಂತ್ರಜ್ಞಾನದ ದುರ್ಬಳಕೆಯಿಂದಾಗುವ ಅನಾಹುತಗಳನ್ನು ಯೋಚಿಸಬೇಕಿದೆ: ಎ.ಎಸ್.ಕಿರಣ್‌ಕುಮಾರ್‌

0

ಮೈಸೂರು(Mysuru): ವಿಜ್ಞಾನ ಹಾಗೂ ತಂತ್ರಜ್ಞಾನ ಬೆಳೆಯುತ್ತಿದೆ. ಮನುಷ್ಯ ತಮ್ಮ ಸಾಮರ್ಥ್ಯದ ಮೂಲಕ ದಬ್ಬಾಳಿಕೆ ಮಾಡಲು ಯುದ್ಧದಲ್ಲಿ ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದಾನೆ‌. ತಂತ್ರಜ್ಞಾನದ ದುರ್ಬಳಕೆಯಿಂದಾಗುವ ಅನಾಹುತಗಳ ಬಗ್ಗೆಯೂ ಯೋಚಿಸಬೇಕಾಗಿದೆ ಎಂದು ಇಸ್ರೋ ನಿವೃತ್ತ ಅಧ್ಯಕ್ಷ, ಖ್ಯಾತ ವಿಜ್ಞಾನಿ ಎ.ಎಸ್.ಕಿರಣ್‌ಕುಮಾರ್‌ ತಿಳಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕೆಆರ್‌ವಿಪಿ) ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಜಿ.ಪಂ., ಜಿಲ್ಲಾಡಳಿತ, ಕೆಎಸ್‌ಒಯು ಹಾಗೂ ಮೈಸೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ನಗರದ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಸೆ.10ರವರೆಗೆ ಹಮ್ಮಿಕೊಂಡಿರುವ ‘14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ’ದ ಉದ್ಘಾಟನಾ ಸಮಾರಂಭದಲ್ಲಿ ಸರ್ವಾಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.

ದೇಶದಲ್ಲಿರುವ ಬೌದ್ಧಿಕ ಸಾಮರ್ಥ್ಯವನ್ನು ಕಚ್ಚಾ ಪ್ರದಾರ್ಥವಾಗಿ ಬಳಸಿಕೊಂಡು ವಸಾಹತುಶಾಹಿ ಪ್ರದೇಶವನ್ನಾಗಿ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಹಿಂದೆ ಬ್ರಿಟಿಷರು ನಮ್ಮಲ್ಲಿದ್ದ ಸಂಪತ್ತಿಗಾಗಿ ಇಲ್ಲಿಗೆ ಬಂದಿದ್ದರು. ಈಗ, ಬೌದ್ಧಿಕ ಸಾಮರ್ಥ್ಯವನ್ನು ದುರುಪಯೋಗದ ಮೂಲಕ ವೈಯಕ್ತಿಕ ಸ್ವಾರ್ಥಕ್ಕೆ ಬಳಸಿಕೊಳ್ಳುವ ದೊಡ್ಡದಾದ ಜಾಲವೊಂದು ಸಕ್ರಿಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಾನವನು ವಿಜ್ಞಾನದ ಹಾಗೂ ತಂತ್ರಜ್ಞಾನದ ಮೂಲಕ‌‌ ಜೀವನ‌ ಸುಧಾರಿಸಿಕೊಂಡು, ಸುಗಮವಾಗಿ ನಡೆಯುತ್ತಿದ್ದಾನೆ. ಬಾಹ್ಯಾಕಾಶದಲ್ಲಿ, ಚಂದ್ರನ ಮೇಲೂ ಕಾಟಿಟ್ಟು ಸಾಧನೆ ಮಾಡುತ್ತಿದ್ದಾನೆ. ಬಾಹ್ಯಾಕಾಶದಲ್ಲೂ ಮೇಲುಗೈ ಸಾಧಿಸಲು ಯತ್ನಿಸುತ್ತಿದ್ದಾನೆ. ಬಾಹ್ಯಾಕಾಶ ಪ್ರವಾಸೋದ್ಯಮದಲ್ಲಿ ಸರ್ಕಾರಗಳೊಂದಿಗೆ ಖಾಸಗಿ ಕಂಪನಿಗಳವರು ಮತ್ತು ಉದ್ಯಮಿಗಳು ಕೂಡ ಪಾಲ್ಗೊಳ್ಳಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.

ಕ್ಷಿಪ್ರವಾಗಿ ಬದಲಾವಣೆ ಕಾಣುತ್ತಿರುವ ಈ ಸಂದರ್ಭದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಾನವ ನಿರಂತವಾಗಿ ಪ್ರಯತ್ನಿಸುತ್ತಿದ್ದಾನೆ. ಹಿಂದೆ ಜೀವನ ನಡೆಸಲು ದೈಹಿಕ ಸಾಮರ್ಥ್ಯ ಬೇಕಾಗುತ್ತಿತ್ತು. ಆದರೀಗ, ತಂತ್ರಜ್ಞಾನಗಳ ಬಳಕೆ ಮೂಲಕ ಸುಲಭ/ ಸುಗಮಗೊಳಿಸಿಕೊಳ್ಳುತ್ತಿದ್ದಾನೆ ಎಂದು ಹೇಳಿದರು.‌

ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ, ಕೆಆರ್‌ವಿಪಿ ಅಧ್ಯಕ್ಷ ಗಿರೀಶ ವಿ.ಕಡ್ಲೆವಾಡ, ಉಪಾಧ್ಯಕ್ಷ ಎಚ್‌.ಜಿ.ಹುದ್ದಾರ್, ಖಜಾಂಚಿ ಈ.ಬಸವರಾಜು, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ಹರಿಪ್ರಸಾದ್, ಮೀನಾಕ್ಷಿ ಕುಡುಸೋಮಣ್ಣವರ, ಡಾ.ರಾಮಚಂದ್ರ, ಶಂಕರ ಟಿ.ನಾಯಕ, ದಾನಿ ಬಾಬುರಾವ್, ಅಣದೊರೆ ಮಹಾರುದ್ರಪ್ಪ, ಬಸವಲಿಂಗಪ್ಪ ಮಲ್ಹಾರ ಇದ್ದರು.