ಮನೆ ಕಾನೂನು ಬಿಬಿಎಂಪಿ ಚುನಾವಣೆ: ಶಾಸಕರಾದ ಜಮೀರ್, ಸೌಮ್ಯ ಅವರಿಂದ ಅರ್ಜಿ ಸಲ್ಲಿಕೆ: ಸರ್ಕಾರ, ಆಯೋಗಕ್ಕೆ ಹೈಕೋರ್ಟ್ ನೋಟಿಸ್

ಬಿಬಿಎಂಪಿ ಚುನಾವಣೆ: ಶಾಸಕರಾದ ಜಮೀರ್, ಸೌಮ್ಯ ಅವರಿಂದ ಅರ್ಜಿ ಸಲ್ಲಿಕೆ: ಸರ್ಕಾರ, ಆಯೋಗಕ್ಕೆ ಹೈಕೋರ್ಟ್ ನೋಟಿಸ್

0

ಬಿಬಿಎಂಪಿಯ ವ್ಯಾಪ್ತಿಯ ಜಯನಗರ ಮತ್ತು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವಾರ್ಡ್’ಗಳ ಮರು ವಿಂಗಡಣೆ ಅಧಿಸೂಚನೆ ಪ್ರಶ್ನಿಸಿ ಶಾಸಕರಾದ ಸೌಮ್ಯರೆಡ್ಡಿ ಮತ್ತು ಬಿ ಝಡ್ ಜಮೀರ್ ಅಹಮದ್ ಖಾನ್ ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯ ವಿವಿಧ ವಿಧಾನಸಭಾ ಕ್ಷೇತ್ರಗಳ ವಾರ್ಡ್ಗಳ ಮರು ವಿಂಗಡಣೆ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಶಾಸಕರಾದ ಸೌಮ್ಯ ರೆಡ್ಡಿ, ಜಮೀರ್ ಅಹ್ಮದ್ ಖಾನ್ ಸೇರಿದಂತೆ ಮತ್ತಿತರರು ಸಲ್ಲಿಸಿರುವ 10ಕ್ಕೂ ಹೆಚ್ಚು ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರ ಪೀಠವು ವಿಚಾರಣೆ ನಡೆಸಿತು.

ಶಾಸಕರಾದ ಸೌಮ್ಯ ರೆಡ್ಡಿ ಮತ್ತು ಜಮೀರ್ ಅಹಮದ್ ಖಾನ್ ಅವರ ಅರ್ಜಿಗೆ ಸಂಬಂಧಿಸಿದಂತೆ ಕೆಲ ಕಾಲ ವಾದ ಆಲಿಸಿದ ನಂತರ ಪ್ರತಿವಾದಿಗಳಾದ ರಾಜ್ಯ ಸರ್ಕಾರ, ರಾಜ್ಯ ಚುನಾವಣಾ ಆಯೋಗ ಮತ್ತು ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದ ಪೀಠವು ಆಕ್ಷೇಪಣೆ ಸಲ್ಲಿಸಲು ಸೂಚಿಸಿತು.

ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ದೆಹಲಿಯಲಿರುವ ಕಾರಣ ವಾದ ಮಂಡನೆಗೆ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದನ್ನು ಪರಿಗಣಿಸಿದ ಪೀಠವು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

ವಾರ್ಡ್ ಮರು ವಿಂಗಡಣೆಯ ವೇಳೆ ಬಿಬಿಎಂಪಿ ಕಾಯಿದೆ-2020ರ ಸೆಕ್ಷನ್ 7 ಅನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ. ವಾರ್ಡ್ ಮರು ವಿಂಗಡಣೆ ಮಾಡುವಾಗ ಜನಸಂಖ್ಯೆ ಪ್ರಮಾಣವನ್ನು ಸಮಾನವಾಗಿ ತೆಗೆದುಕೊಳ್ಳಬೇಕು ಎಂದು ಬಿಬಿಎಂಪಿ ಕಾಯಿದೆಯ ಸೆಕ್ಷನ್ 7 ಹೇಳುತ್ತದೆ. ಆದರೆ, ವಾರ್ಡ್ ಮರು ವಿಂಗಡಣೆ ವೇಳೆ ಜನಸಂಖ್ಯೆ ಪ್ರಮಾಣ ಪರಿಗಣಿಸುವಲ್ಲಿ ಸರ್ಕಾರ ತಾರತಮ್ಯ ಮಾಡಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳ ವಾರ್ಡ್ಗಳ ಮರು ವಿಂಗಡಣೆಗೆ 30 ಸಾವಿರ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವಾರ್ಡ್ ವಿಂಗಡಣೆಯಲ್ಲಿ 39 ಸಾವಿರ ಜನಸಂಖ್ಯೆಯನ್ನು ತೆಗೆದುಕೊಳ್ಳಲಾಗಿದೆ. ಚಾಮರಾಜಪೇಟೆಯಲ್ಲಿ ಹಿಂದೆ ಏಳು ವಾರ್ಡ್’ಗಳ ಇದ್ದವು. ಪ್ರಸ್ತುತ ಒಂದು ವಾರ್ಡ್ ಅನ್ನು ಕಡಿಮೆ ಮಾಡಲಾಗಿದೆ ಎಂದು ಶಾಸಕ ಜಮೀರ್ ತಮ್ಮ ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.

ಜಯನಗರ ಮತ್ತು ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ವಾರ್ಡ್’ಗಳ ವಿಂಡಗಣೆಯಲ್ಲಿ ಒಂದೇ ಪ್ರಮಾಣದ ಜನಸಂಖ್ಯೆಯನ್ನು ಪರಿಗಣಿಸಲಾಗಿದೆ. ಆದರೆ, ಚಿಕ್ಕಪೇಟೆಯಲ್ಲಿ ಈ ಮೊದಲಿದ್ದ ವಾರ್ಡ್’ಗಳ ಸಂಖ್ಯೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಜಯನಗರದಲ್ಲಿ ಮಾತ್ರ ಒಂದು ವಾರ್ಡ್ ಕಡಿಮೆ ಮಾಡಲಾಗಿದೆ. ಆಡಳಿತ ಪಕ್ಷವು ಪ್ರಾಬಲ್ಯ ಹೊಂದಿರುವ ಕಡೆಯಲ್ಲಿ ರಾಜಕೀಯವಾಗಿ ಲಾಭ ಪಡೆಯಲು ಹೀಗೆ ಮಾಡಲಾಗಿದೆ ಎಂದು ಶಾಸಕಿ ಸೌಮ್ಯಾ ರೆಡ್ಡಿ ಆಕ್ಷೇಪಿಸಿದ್ದಾರೆ. ಬಿಬಿಎಂಪಿ ವಾರ್ಡ್’ಗಳನ್ನು ಪುನರ್ ರಚಿಸಿ 2022ರ ಜುಲೈ 14ರಂದು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.