ಮನೆ ಕಾನೂನು ಮಳೆ ನೀರು ಮನೆಗೆ ನುಗ್ಗಿ ಹಾನಿಯಾದರೆ ಅದಕ್ಕೆ ಪಾಲಿಕೆ ಹೊಣೆ: ದೆಹಲಿ ಹೈಕೋರ್ಟ್

ಮಳೆ ನೀರು ಮನೆಗೆ ನುಗ್ಗಿ ಹಾನಿಯಾದರೆ ಅದಕ್ಕೆ ಪಾಲಿಕೆ ಹೊಣೆ: ದೆಹಲಿ ಹೈಕೋರ್ಟ್

0

ಮಳೆ ನೀರು ಚರಂಡಿಯಲ್ಲಿ ಹರಿಯದೆ ಮನೆಗೆ ನುಗ್ಗಿ ಹಾನಿಯಾದರೆ ಅದಕ್ಕೆ ನೇರವಾಗಿ ಮಹಾನಗರ ಪಾಲಿಕೆ ಅಥವಾ  ಸ್ಥಳೀಯ ಸಂಸ್ಥೆಯೇ ಹೊಣೆ. ಇದಕ್ಕೆ ಮಹಾನಗರಪಾಲಿಕೆಯೇ ಪರಿಹಾರ ನೀಡಬೇಕು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.

12 ವರ್ಷ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ಚಾಟಿ ಬೀಸಿ 9 ಲಕ್ಷ ರೂ. ಪರಿಹಾರ ನೀಡುವಂತೆ ದೆಹಲಿ ಹೈಕೋರ್ಟ್ ಸೂಚಿಸಿದೆ.

ಸದರಿ ಪ್ರಕರಣದ ತೀರ್ಪು ನೀಡುವ ಸಂದರ್ಭ ಈ ವಿಚಾರ ಪ್ರಸ್ತಾಪಿಸಿರುವ ನ್ಯಾಯಾಲಯ, ಸಮರ್ಪಕವಾದ ಚರಂಡಿಗಳನ್ನು ನಿರ್ಮಿಸಿ, ಮಳೆ ನೀರು ನಿಲ್ಲದಂತೆ ನೋಡಿಕೊಳ್ಳುವುದು ಮುನ್ಸಿಪಲ್ ಕಾರ್ಪೊರೇಷನ್ ಯಾ ಸ್ಥಳೀಯಾಡಳಿತದ ಕರ್ತವ್ಯ. ಒಂದು ವೇಳೆ, ಮಳೆ ನೀರು ಮನೆಗೆ ನುಗ್ಗಿ ನಷ್ಟವಾದರೆ ಅದಕ್ಕೆ ಪಾಲಿಕೆಯೇ ಹೊಣೆ ಎಂದು ಹೇಳಿದೆ.

ನವದೆಹಲಿಯಲ್ಲಿ 2010ರಲ್ಲಿ ಸುರಿದ ಧಾರಾಕಾರ ಮಳೆಯಿಂದ ಚರಂಡಿ ನೀರು ಮನೆಗೆ ನುಗ್ಗಿ ಅಪಾರ ನಷ್ಟವಾಗಿತ್ತು. ಈ ಘಟನೆಯಲ್ಲಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳ ಕರ್ತವ್ಯ ಲೋಪ ಆರೋಪಿಸಿ ಲೀಲಾ ಮಾಥುರ್ ದೆಹಲಿ ಹೈಕೋರ್ಟ್’ಗೆ ಅರ್ಜಿ ಸಲ್ಲಿಸಿದ್ದರು.

ತಮ್ಮ ಮನೆ ನಿರ್ಮಿಸಿದಾಗ ಅದು ರಸ್ತೆಗೆ ಸಮತಳದ ಮಟ್ಟದಲ್ಲಿತ್ತು. ಆದರೆ, ಪಾಲಿಕೆ ಹಲವು ಬಾರಿ ರಸ್ತೆ ಪುನರ್ನಿರ್ಮಾಣ ಮಾಡಿ ರಸ್ತೆಯ ಮಟ್ಟ ಎತ್ತರಗೊಳಿಸಿತು. ಆ ಕಾರಣ, ಮನೆ ತಗ್ಗು ಪ್ರದೇಶದಲ್ಲಿ ಉಳಿಯುವಂತೆ ಅಧಿಕಾರಿಗಳು ಮಾಡಿದ್ದು, ಇದರಿಂದ ಮಳೆ ನೀರು ಮನೆಗೆ ನುಗ್ಗಿದೆ ಎಂದು ವಾದ ಮಂಡಿಸಿದ್ದರು. ಈ ಸಮಸ್ಯೆ ಪರಿಹರಿಸಲು ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಗಮನ ಹರಿಸಲಿಲ್ಲ ಎಂದು ಅರ್ಜಿದಾರರು ಹೈಕೋರ್ಟ್’ಗೆ ಹೇಳಿದರು.

ನೀರು ಹರಿಯುವ ಚರಂಡಿಗಳು ಮುಚ್ಚಿ ಹೋಗಿವೆ. ಹಾಗಾಗಿ, ಪಾಲಿಕೆಯಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ದೆಹಲಿ ಪಾಲಿಕೆ ವಾದ ಮಂಡಿಸಿತ್ತು. ಪಾಲಿಕೆ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ಶೋಚನೀಯವಾಗಿ ವಿಫಲವಾಗಿದೆ. ಅವೈಜ್ಞಾನಿಕವಾಗಿ ರಸ್ತೆಗಳನ್ನು ಎತ್ತರವಾಗಿ ನಿರ್ಮಿಸಿದ್ದು, ಈ ಪ್ರದೇಶದಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ಮಳೆ ನೀರಿನ ಚರಂಡಿಗಳಿವೆ ಎಂದು ಖಚಿತಪಡಿಸಿಲ್ಲ ಎಂದು ಕೋರ್ಟ್ ಗಮನಿಸಿತು.

ಪ್ರತಿ ನಾಗರಿಕರಿಗೂ ಮೂಲಭೂತ ಸೌಕರ್ಯ ಒದಗಿಸುವ ನಿಖರ ಉದ್ದೇಶಕ್ಕಾಗಿ ಸ್ಥಾಪನೆಯಾದ ಸ್ಥಳೀಯಾಡಳಿತ ಸಂಸ್ಥೆಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ತನ್ನ ಜವಾಬ್ದಾರಿಯನ್ನು ನಿರ್ವಹಿಸದಿರುವ ಎಂಸಿಡಿ ತನ್ನ ನಿರ್ಲಕ್ಷ್ಯಕ್ಕೆ ಮೇಲ್ಮನವಿದಾರರಿಗೆ ಸಂಪೂರ್ಣ ನ್ಯಾಯ ಒದಗಿಸಬೇಕು. ಹಾಗಾಗಿ, ಪರಿಹಾರದ ಮೊತ್ತವನ್ನು 3 ಲಕ್ಷದಿಂದ 9 ಲಕ್ಷ ರೂ.ಗೆ ಏರಿಸಬೇಕು ಎಂದು ಕೋರ್ಟ್ ಆದೇಶ ನೀಡಿತು.