ಮನೆ ಕಾನೂನು ಸಿಲಿಂಡರ್ ಸ್ಪೋಟಿಸಿ 6 ಜನರ ಸಾವು ಪ್ರಕರಣ: ಕೊಲೆ ಆರೋಪ ಮುಕ್ತರಾದ ಐವರು

ಸಿಲಿಂಡರ್ ಸ್ಪೋಟಿಸಿ 6 ಜನರ ಸಾವು ಪ್ರಕರಣ: ಕೊಲೆ ಆರೋಪ ಮುಕ್ತರಾದ ಐವರು

0

ಬೀದರ್‌(Beedar): ಭಾಲ್ಕಿ ತಾಲ್ಲೂಕಿನ ವರವಟ್ಟಿ (ಬಿ) ಗ್ರಾಮದ ಮನೆಯಲ್ಲಿ ಸಿಲಿಂಡರ್‌ ಸ್ಫೋಟಿಸಿ ಒಂದೇ ಕುಟುಂಬದ ಆರು ಜನರ ಸಾವಿಗೆ ಕಾರಣರಾದ ಆರೋಪ ಎದುರಿಸುತ್ತಿದ್ದ ಐವರನ್ನು ಇಲ್ಲಿಯ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಶುಕ್ರವಾರ ಆರೋಪ ಮುಕ್ತಗೊಳಿಸಿದೆ.

ವರವಟ್ಟಿ (ಬಿ) ಗ್ರಾಮದಲ್ಲಿ 2015ರ ಏಪ್ರಿಲ್ 26ರಂದು ಸುಟ್ಟ ಗಾಯಗಳಿಂದಾಗಿ ಈಶ್ವರ ಸೇರಿದಂತೆ 6 ಜನರು ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ.

ವರವಟ್ಟಿ ಗ್ರಾಮದ ಈಶ್ವರ ಮತ್ತು ಆರೋಪಿಗಳಾದ ಸುಧಾಕರ, ರಾಜೇಂದ್ರ ಅವರ ಮಧ್ಯೆ ಜಮೀನು ಹಂಚಿಕೆ ವಿಷಯದಲ್ಲಿ ಐದು ವರ್ಷಗಳಿಂದ ವಿವಾದ ಇತ್ತು. 2015ರ ಏಪ್ರಿಲ್ 26ರಂದು ರಾತ್ರಿ 2.30ಕ್ಕೆ ಸುಧಾಕರ ಅವರು ಸಿಲಿಂಡರ್ ಗ್ಯಾಸ್‌ ಲೀಕ್‌ ಮಾಡಿ ಮನೆ ಮೇಲಿನ ತಗಡು ತೆಗೆದು ಮನೆಯೊಳಗೆ ಇಟ್ಟು ಬೆಂಕಿ ಹಚ್ಚಿದ್ದರು ಎಂದು ಆರೋಪಿಸಲಾಗಿತ್ತು.

ಮನೆಯೊಳಗೆ ಇದ್ದ ಈಶ್ವರ ತುಕಾರಾಮ, ತುಕಾರಾಮ ನರಸಿಂಗ್, ಪಾರ್ವತಿ ಈಶ್ವರ, ಧರ್ಮೇಂದ್ರ ಈಶ್ವರ, ಜಿತೇಂದ್ರ ಈಶ್ವರ ಹಾಗೂ ಮುಕೇಂದ್ರ ಈಶ್ವರ ಬೆಂಕಿಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಏಪ್ರಿಲ್ 28ರಂದು ತುಕಾರಾಮ, ಏಪ್ರಿಲ್‌ 30ರಂದು ಜಿತೇಂದ್ರ, ಮೇ 2ರಂದು ಧರ್ಮೇಂದ್ರ, ಪಾರ್ವತಿ, ಮುಕೇಂದ್ರ ಮೃತಪಟ್ಟಿದ್ದರು. ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಸುಧಾಕರ, ರಾಜೇಂದ್ರ, ಚಂದ್ರಕಲಾ, ಬಬೀತಾ ಹಾಗೂ ದೀಪಕ ಅವರ ವಿರುದ್ಧ ದೋಷರೋಪ ಪಟ್ಟಿ ಸಲ್ಲಿಸಲಾಗಿತ್ತು.

ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ 31 ಸಾಕ್ಷಿಗಳ ವಿಚಾರಣೆ ನಡೆಸಿ, ಸಂಶಯದ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಆದ್ದರಿಂದ ಎಲ್ಲರನ್ನೂ ಕೊಲೆ ಆರೋಪದಿಂದ ಮುಕ್ತಗೊಳಿಸಿದೆ. ಆರೋಪಿಗಳ ಪರವಾಗಿ ನಾರಾಯಣ ಗಣೇಶ ವಾದ ಮಂಡಿಸಿದ್ದರು.